ಪ್ರಧಾನಿ ಭಾರತದ ಹಿತಾಸಕ್ತಿಗಳನ್ನು ಬಲಿ ಕೊಟ್ಟಿದ್ದಾರೆ: ರಾಹುಲ್

Update: 2019-07-23 08:40 GMT

ಹೊಸದಿಲ್ಲಿ, ಜು.23:  “ಇತ್ತೀಚೆಗೆ  ಪ್ರಧಾನಿ ನರೇಂದ್ರ ಮೋದಿ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ  ಸಂದರ್ಭ ಏನು ಮಾತುಕತೆಗಳು ನಡೆಯಿತೆನ್ನುವ ಕುರಿತಂತೆ ಪ್ರಧಾನಿ ಮೋದಿ ದೇಶಕ್ಕೆ ತಿಳಿಸಬೇಕು'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಸಂಧಾನ ನಡೆಸಲು ಮೋದಿ ತಮಗೆ ಮನವಿ ಮಾಡಿದ್ದಾರೆಂದು ಪಾಕ್ ಪ್ರಧಾನಿ ಜತೆಗಿನ ಮಾತುಕತೆಗಳ ವೇಳೆ ಟ್ರಂಪ್ ಹೇಳಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿರುವ ನಡುವೆ ರಾಹುಲ್ ಅವರ ಆಗ್ರಹ ಕೇಳಿ ಬಂದಿದೆ.

“ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ ಮತ್ತು ಪಾಕ್ ನಡುವೆ ಸಂಧಾನ ನಡೆಸುವಂತೆ ಪ್ರಧಾನಿ ಮೋದಿ ತಮಗೆ ಹೇಳಿದ್ದರೆಂದು ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. ಇದು ನಿಜವಾಗಿದ್ದರೆ ಪ್ರಧಾನಿ ಮೋದಿ ಭಾರತದ ಹಿತಾಸಕ್ತಿಗಳನ್ನು ಬಲಿ ಕೊಟ್ಟಿದ್ದಾರೆ ಹಾಗೂ 1972ರ ಶಿಮ್ಲಾ ಒಪ್ಪಂದವನ್ನೂ ಉಲ್ಲಂಘಿಸಿದ್ದಾರೆ. ವಿದೇಶಾಂಗ ಸಚಿವಾಲಯದ ನಿರಾಕರಣೆ ಸಾಲದು. ಸಭೆಯಲ್ಲಿ ಏನು ನಡೆಯಿತು ಎಂದು ಪ್ರಧಾನಿ  ದೇಶಕ್ಕೆ ಹೇಳಬೇಕು'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಸಂಸತ್ತಿನಲ್ಲಿ ಇಂದು ಕಾಂಗ್ರೆಸ್ ಕೂಡ ಇದೇ ವಿಚಾರದಲ್ಲಿ ಪ್ರಧಾನಿಯಿಂದ ಸ್ಪಷ್ಟೀಕರಣ ಕೇಳಿದೆ. ರಾಹುಲ್ ಸಂಸತ್ ಅಧಿವೇಶನದಲ್ಲಿ ಭಾಗವಹಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News