ಮತದಾರರನ್ನು ಸೆಳೆಯಲು ‘ಕ್ರೈಸ್ತ ಮಿಷನರಿ ವಿಭಾಗ’ ಆರಂಭಿಸಿದ ಮಿಝೋರಾಂ ಬಿಜೆಪಿ

Update: 2019-07-23 10:24 GMT

ಹೊಸದಿಲ್ಲಿ, ಜು.23:  ಬಿಜೆಪಿ ಕೋಮುವಾದಿ ಪಕ್ಷ ಎಂಬ ಜನರ ಅಭಿಪ್ರಾಯವನ್ನು ಬದಲಿಸಲು ಬಿಜೆಪಿ ಮಿಝೋರಾಂನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಯತ್ನವಾಗಿ ತನ್ನ ಘಟಕದಲ್ಲಿ ಒಂದು ಕ್ರಿಶ್ಚಿಯನ್ ಮಿಷನರಿ ವಿಭಾಗ ಆರಂಭಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಪ್ರಭಾವ ಬೀರಲು ವಿಫಲವಾಗಿತ್ತು.

ರಾಜ್ಯದ ಬಹುಸಂಖ್ಯಾತ ಕ್ರೈಸ್ತ ಜನಸಂಖ್ಯೆಯ ವಿಶ್ವಾಸ ಗಳಿಸುವ ಉದ್ದೇಶ ಹೊಂದಿರುವ ಈ ವಿಭಾಗವನ್ನು ಬಿಜೆಪಿಯ ಹೊಸ ಸದಸ್ಯ ಪು ಲಾಲ್ಹರಿಯಾತ್ರೆಂಗ  ಛಂಗ್ತೆ ಅವರು ವಹಿಸಲಿದ್ದಾರೆ.  ಇತರ ಸಮಿತಿ ಸದಸ್ಯರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜೆ.ವಿ. ಹ್ಲುನಾ ಅವರ ಸಲಹೆ ಪಡೆದು ನೇಮಿಸಲಾಗುವುದು.

ಪು ಲಾಲ್ಹರಿಯಾತ್ರೆಂಗ  ಅವರು ರಾಜ್ಯದ ಪ್ರಥಮ ಗಣಿ ಇಂಜಿನಿಯರ್ ಆಗಿದ್ದು, ಮಿಝೋರಾಂನಲ್ಲಿ ಬಹಳಷ್ಟು ಜನಪ್ರಿಯರಾಗಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಲು  ಬಿಜೆಪಿ ಬಹಳ ಸಮಯದಿಂದ ಪ್ರಯತ್ನಿಸುತ್ತಿದೆ. ಮಿಝೋರಾಂನಲ್ಲಿನ ಏಕೈಕ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಬಿಜೆಪಿ ಟಿಕೆಟ್ ಆಫರ್ ಮಾಡಿತ್ತಾದರೂ ಅವರು ನಿರಾಕರಿಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅಂತಿಮವಾಗಿ ಜುಲೈ 12ರಂದು ಅವರು ಬಿಜೆಪಿ ಸೇರಿದ್ದರು.

ಅವರ ನೇತೃತ್ವದ ಬಿಜೆಪಿಯ ಕ್ರಿಶ್ಚಿಯನ್ ಮಿಷನರಿ ಘಟಕವು ಚರ್ಚುಗಳು ಹಾಗೂ ಮಿಷನರಿಗಳಿಗೆ  ಸಹಾಯ ಮಾಡಲಿದ್ದು ಹಾಗೂ ಈ ಮೂಲಕ ಬಿಜೆಪಿಯ ಬಗ್ಗೆ ಕ್ರೈಸ್ತರಲ್ಲಿ ಒಳ್ಳೆಯ ಭಾವನೆ ಮೂಡುವಂತಾಗಲು ಪ್ರಯತ್ನಿಸಲಿದೆ.

 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ 40 ಕ್ಷೇತ್ರಗಳ ಪೈಕಿ 39ರಲ್ಲಿ ಸ್ಪರ್ಧಿಸಿದ್ದರೂ ಚಕ್ಮಾ ಬಹುಸಂಖ್ಯಾತ ಪ್ರದೇಶವಾದ ತುಯಿಚಾವಂಗ್ ಕ್ಷೇತ್ರದಿಂದ  ಮಾತ್ರ ಜಯ ಗಳಿಸಲು ಸಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News