2019ರಲ್ಲಿ ಭಾರತದ ಜಿಡಿಪಿ ಶೇ.7ಕ್ಕೆ ಕುಸಿತ: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ

Update: 2019-07-23 17:00 GMT

ಹೊಸದಿಲ್ಲಿ, ಜು.23: 2019 ಮತ್ತು 2020ರ ಸಾಲಿಗೆ ಭಾರತದ ಪ್ರಗತಿ ದರ ಕುಂಠಿತವಾಗಲಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಮುನ್ಸೂಚನೆ ನೀಡಿದ್ದು, ಎರಡೂ ವರ್ಷ ನಿರೀಕ್ಷಿತ ಪ್ರಮಾಣಕ್ಕಿಂತ ಶೇ.0.3ರ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ತಿಳಿಸಿದೆ.

ಈ ಎರಡು ವರ್ಷ ಭಾರತದ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ)ದ ಪ್ರಮಾಣ ಕ್ರಮವಾಗಿ ಶೇ.7 ಮತ್ತು ಶೇ.7.2 ಆಗಿರಲಿದೆ. ಇದು ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿದೆ . ದೇಶೀಯ ಉತ್ಪನ್ನಗಳಿಗೆ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಪ್ರಮಾಣದ ಬೇಡಿಕೆ ಬರುವುದು ಇದಕ್ಕೆ ಕಾರಣವಾಗಿದೆ ಎಂದು ಐಎಂಎಫ್ ಹೇಳಿದೆ. ಆದರೂ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ದೇಶಗಳಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲೇ ಮುಂದುವರಿಯಲಿದೆ ಎಂದು ಐಎಂಎಫ್‌ನ ಜಾಗತಿಕ ಆರ್ಥಿಕತೆಯ ಇತ್ತೀಚಿನ ಅಂಕಿಅಂಶದ ವರದಿಯಲ್ಲಿ ತಿಳಿಸಲಾಗಿದೆ.

ಚೀನಾದಲ್ಲಿ ತೆರಿಗೆ ದರವನ್ನು ಹೆಚ್ಚಿಸಿರುವುದು ಹಾಗೂ ಚೀನಾದ ಉತ್ಪನ್ನಗಳಿಗೆ ವಿದೇಶದಲ್ಲಿ ಬೇಡಿಕೆ ಕಡಿಮೆಯಾಗಿರುವುದು ಆ ದೇಶದ ಪ್ರಗತಿ ದರದ ಮೇಲೆ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಿದೆ. ಸಾಲದ ಮೇಲೆ ಹೆಚ್ಚಿನ ಸ್ವಾವಲಂಬನೆ ಸಾಧಿಸಿದರೆ ಚೀನಾದ ಪ್ರಗತಿ ದರ ನಿರೀಕ್ಷಿತ ಮಟ್ಟದಲ್ಲಿರಲಿದೆ ಎಂದು ಐಎಂಎಫ್ ತಿಳಿಸಿದೆ.

ಚಿಲಿ ದೇಶದ ರಾಜಧಾನಿ ಸಾಂಟಿಯಾಗೊದಲ್ಲಿ ಐಎಂಎಫ್‌ನ ವರದಿಯನ್ನು ಬಿಡುಗಡೆಗೊಳಿಸಿದ ಐಎಂಎಫ್‌ನ ಭಾರತೀಯ ಮೂಲದ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪೀನಾಥ್, 2019 ಮತ್ತು 2020ಕ್ಕೆ ಜಾಗತಿಕ ಪ್ರಗತಿ ದರವೂ ಕೆಳಮುಖವಾಗಲಿದ್ದು, ಕ್ರಮವಾಗಿ ಶೇ.3.2 ಹಾಗೂ 3.5ರ ಪ್ರಮಾಣದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News