ಎನ್‌ಆರ್‌ಸಿ ಅಂತಿಮ ಪಟ್ಟಿ ಪ್ರಕಟಣೆಯ ಅವಧಿ ಆ.31ರವರೆಗೆ ಮುಂದೂಡಿಕೆ

Update: 2019-07-23 17:46 GMT

  ಹೊಸದಿಲ್ಲಿ, ಜು.23: ಅಸ್ಸಾಂನ ಪೌರತ್ವ ಪಟ್ಟಿ ಪ್ರಕಟಣೆಯ ಅಂತಿಮ ದಿನಾಂಕವನ್ನು ಸುಪ್ರೀಂಕೋರ್ಟ್ ಆಗಸ್ಟ್ 31ರವರೆಗೆ ಮುಂದೂಡಿದೆ. ಆದರೆ ಗಡಿ ಜಿಲ್ಲೆಗಳ ಶೇ.20ರಷ್ಟು ಹಾಗೂ ಇತರ ಜಿಲ್ಲೆಗಳ ಶೇ.10ರಷ್ಟು ಹೆಸರನ್ನು ಪುನರ್ ಪರಿಶೀಲಿಸಬೇಕೆಂಬ ಕೇಂದ್ರ ಸರಕಾರ ಹಾಗೂ ಅಸ್ಸಾಂ ಸರಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯ ಅಂತಿಮ ಪಟ್ಟಿಯಲ್ಲಿ ಸುಮಾರು 40 ಲಕ್ಷ ಜನರ ಹೆಸರನ್ನು ಕೈಬಿಡಲಾಗಿತ್ತು. ಪಟ್ಟಿಯಿಂದ ಕೈಬಿಡಲಾಗಿರುವ ಜನರು ಸೂಕ್ತ ದಾಖಲೆ ಪತ್ರ ಸಲ್ಲಿಸಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸುವ ಅವಕಾಶವನ್ನು ನೀಡಲಾಗಿದ್ದು ಈ ಪ್ರಕ್ರಿಯೆಗೆ 2019ರ ಜುಲೈ 31 ಅಂತಿಮ ದಿನ ಎಂದು ಸುಪ್ರೀಂಕೋರ್ಟ್ ಗಡುವು ವಿಧಿಸಿತ್ತು.

 ಇದುವರೆಗೆ ಸಿದ್ಧಪಡಿಸಿರುವ ಪಟ್ಟಿಯಿಂದ ಹಲವು ನಾಗರಿಕರ ಹೆಸರು ಹೊರಗುಳಿಸಿದೆ. ಅಲ್ಲದೆ ಲಕ್ಷಾಂತರ ಅಕ್ರಮ ವಲಸಿಗರ ಹೆಸರು ಸೇರ್ಪಡೆಗೊಂಡಿದೆ. ಇದರ ಪರಿಶೀಲನೆಗೆ ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಕೇಂದ್ರ ಸರಕಾರ ಮನವಿ ಮಾಡಿಕೊಂಡಿತ್ತು.

 ಭಾರತದೊಳಗೆ ಅತ್ಯಧಿಕ ಪ್ರಮಾಣದ ಅಕ್ರಮ ವಲಸಿಗರು ಬಾಂಗ್ಲಾದೇಶದ ಗಡಿಯಿಂದ ಒಳನುಸುಳುತ್ತಿದ್ದು, ಗಡಿಭಾಗದ ಶೇ.20ರಷ್ಟು ಜಿಲ್ಲೆಗಳಲ್ಲಿ ಪಟ್ಟಿಯಲ್ಲಿರುವ ಹೆಸರಿನ ಮರು ಪರಿಶೀಲನೆಯ ಅಗತ್ಯವಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News