ಕಾಶ್ಮೀರದ ವಿವಿಧೆಡೆ ಎನ್‌ಐಎ ಶೋಧ ಕಾರ್ಯಾಚರಣೆ

Update: 2019-07-23 17:51 GMT

ಶ್ರೀನಗರ, ಜು.23: ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ಪುಲ್ವಾಮ ಮತ್ತು ಶ್ರೀನಗರದ ಏಳು ಪ್ರದೇಶಗಳಲ್ಲಿ ಮಂಗಳವಾರ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾದ ಗಡಿ ನಿಯಂತ್ರಣ ರೇಖೆಯಾಚೆಗಿನ ವ್ಯಾಪಾರಿಗಳ ಸಂಘಟನೆಯ ಅಧ್ಯಕ್ಷ ತನ್ವೀರ್ ವಾನಿಗೆ ಸೇರಿದ ಸಂಸ್ಥೆಗಳ ಮೇಲೆಯೂ ದಾಳಿ ನಡೆದಿದೆ. ಗಡಿ ನಿಯಂತ್ರಣ ರೇಖೆಯಾಚೆಗೆ ನಡೆಯುತ್ತಿರುವ ವ್ಯಾಪಾರದ ಹೆಸರಿನಲ್ಲಿ ಉಗ್ರರ ಸಂಘಟನೆಗೆ ಅಕ್ರಮವಾಗಿ ಹಣವನ್ನು ವರ್ಗಾಯಿಸಲಾಗುತ್ತಿದೆ . ಅಲ್ಲದೆ ಕ್ಯಾಲಿಫೋರ್ನಿಯಾ ಬಾದಾಮಿಗಳನ್ನು ಗಡಿ ನಿಯಂತ್ರಣ ರೇಖೆಯಾಚೆಗಿನ ವ್ಯಾಪಾರ ಪ್ರಕ್ರಿಯೆಯ ಮೂಲಕ ಆಮದು ಮಾಡಿಕೊಂಡು ಹಣ ವರ್ಗಾಯಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಎನ್‌ಐಎ ತಂಡ, ರಾಜ್ಯ ಪೊಲೀಸರು ಹಾಗೂ ಅರೆಸೇನಾ ಪಡೆಯ ತಂಡದವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

 ಗಡಿ ನಿಯಂತ್ರಣ ರೇಖೆಯಾಚೆಗಿನ ವ್ಯಾಪಾರದಲ್ಲಿ ಮೂರನೇ ರಾಷ್ಟ್ರದ ವಸ್ತುಗಳಿಗೆ ನಿಷೇಧವಿದೆ. ಅಲ್ಲದೆ ಈ ಪ್ರಕ್ರಿಯೆಯ ಮೂಲಕ ಪಡೆಯುವ ಹಣವನ್ನು ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಒದಗಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News