ನ. 14ರಿಂದ 'ಆಳ್ವಾಸ್ ನುಡಿಸಿರಿ, ವಿರಾಸತ್ 2019' ಉತ್ಸವ

Update: 2019-07-24 06:53 GMT

ಮೂಡುಬಿದಿರೆ: ಈ ವರ್ಷದ ‘ಆಳ್ವಾಸ್ ನುಡಿಸಿರಿ ವಿರಾಸತ್-2019’ ಉತ್ಸವವು ನ. 14, 15, 16 ಮತ್ತು 17ರಂದು ನಡೆಯಲಿದೆ ಎಂದು   ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಕಾರ್ಯಕ್ರಮವು ಕನ್ನಡ ನಾಡು-ನುಡಿ-ಸಂಸ್ಕೃತಿಯ ಉತ್ಸವವಾಗಿದ್ದು, ‘ಆಳ್ವಾಸ್ ನುಡಿಸಿರಿ’ ರಾಷ್ಟ್ರೀಯ ಸಮ್ಮೇಳನವಾದರೆ, ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಎಂದು ಅವರು ತಿಳಿಸಿದ್ದು, 'ಆಳ್ವಾಸ್ ವಿರಾಸತ್’ಗೆ 25 ಮತ್ತು ‘ಆಳ್ವಾಸ್ ನುಡಿಸಿರಿ’ಗೆ  15 ವರ್ಷಗಳು ಸಂದಿದ್ದು ಈ ವರ್ಷ 26 ಮತ್ತು 16ನೇ ವರ್ಷಗಳನ್ನು ವಿನೂತನಾಗಿ ಆಚರಿಸಲು ಯೋಚಿಸಿದ್ದೇವೆ ಎಂದು ಹೇಳಿದರು.

ಆಳ್ವಾಸ್ ನುಡಿಸಿರಿ ಸಭಾಂಗಣದ ರತ್ನಾಕರವರ್ಣಿ ವೇದಿಕೆಯಲ್ಲಿ ಹಗಲು ಹೊತ್ತಿನಲ್ಲಿ ಸಾಹಿತ್ಯಕ ಕಾರ್ಯಕ್ರಮಗಳು, ರಾತ್ರಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಳ್ವಾಸ್ ನುಡಿಸಿರಿ ಕಾರ್ಯಕ್ರಮಗಳಾಗಿದ್ದು, ಅದೇ ದಿನಾಂಕದಂದು ವಿದ್ಯಾಗಿರಿಯ ‘ಆಳ್ವಾಸ್ ಪ್ಯಾಲೇಸ್ ಗ್ರೌಂಡ್’ನಲ್ಲಿ ಆಳ್ವಾಸ್ ವಿರಾಸತ್ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ನ. 14ರಂದು ಬೆಳಗ್ಗೆ ‘ಆಳ್ವಾಸ್ ವಿದ್ಯಾರ್ಥಿಸಿರಿ’ ಅಂದು ಸಂಜೆ ‘ಆಳ್ವಾಸ್ ವಿರಾಸತ್’ ಉದ್ಘಾಟನೆ ಮತ್ತು ‘ಆಳ್ವಾಸ್ ಕೃಷಿಸಿರಿ’ ಉದ್ಘಾಟನೆಗಳು ನಡೆಯಲಿವೆ. ನ.15ರಂದು ಬೆಳಗ್ಗೆ ‘ಆಳ್ವಾಸ್ ನುಡಿಸಿರಿ’ ಉದ್ಘಾಟನೆಗೊಂಡು ನ. 17ರಂದು ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಪ್ರತಿನಿಧಿಯಾಗ ಬಯಸುವವರು 100 ರೂ. ಶುಲ್ಕದೊಂದಿಗೆ ಸದಸ್ಯರಾಗಬಹುದು. ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಉಚಿತ ಪ್ರವೇಶವಿದೆ ಎಂದು ಡಾ. ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 08258-261229, Email : nudisiri@alvas.org ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News