ಮೋದಿ-ಟ್ರಂಪ್ ಭೇಟಿ ಸಂದರ್ಭ ಕಾಶ್ಮೀರದ ಬಗ್ಗೆ ಚರ್ಚೆ ಆಗಿಲ್ಲ: ರಾಜನಾಥ್

Update: 2019-07-24 16:12 GMT

ಹೊಸದಿಲ್ಲಿ, ಜು.24: ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆಯ ಪ್ರಶ್ನೆಯೇ ಇಲ್ಲ. ಭಾರತದ ಸ್ವಾಭಿಮಾನದ ವಿಷಯದಲ್ಲಿ ಎಂದಿಗೂ ರಾಜಿಯಾಗಲು ಸಾಧ್ಯವಿಲ್ಲ. ಅಲ್ಲದೆ ಜೂನ್‌ನಲ್ಲಿ ಟ್ರಂಪ್- ಮೋದಿ ಭೇಟಿಯ ಸಂದರ್ಭ ಕಾಶ್ಮೀರ ಸಮಸ್ಯೆಯಲ್ಲಿ ಮಧ್ಯಸ್ಥಿಕೆಯ ವಿಷಯ ಚರ್ಚೆಗೆ ಬಂದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೇಳಿದ್ದಾರೆ.

ಪ್ರಧಾನಿ ಮೋದಿ ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ತನ್ನನ್ನು ಕೇಳಿಕೊಂಡಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧಪಕ್ಷಗಳು ಬುಧವಾರ ಲೋಕಸಭೆಯಲ್ಲಿ ಪ್ರತಿಭಟನೆ ನಡೆಸಿದವು. ಅಲ್ಲದೆ ಈ ಬಗ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದವು.

ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದ ವಿದೇಶ ವ್ಯವಹಾರ ಸಚಿವ ಜೈಶಂಕರ್, ಪ್ರಧಾನಿ ಮೋದಿ ಅಮೆರಿಕದ ಅಧ್ಯಕ್ಷರಿಗೆ ಇಂತಹ ಕೋರಿಕೆ ಸಲ್ಲಿಸಿಲ್ಲ ಎಂದು ಸ್ಪಷ್ಟ ಭರವಸೆ ನೀಡುವುದಾಗಿ ಹೇಳಿದ್ದರು. ಇದನ್ನು ಉಲ್ಲೇಖಿಸಿದ ಸಿಂಗ್, ಒಸಾಕದಲ್ಲಿ ಮೋದಿ-ಟ್ರಂಪ್ ಭೇಟಿಯ ಸಂದರ್ಭ ಜೈಶಂಕರ್ ಕೂಡಾ ಇದ್ದರು. ಅವರ ಹೇಳಿಕೆಗಿಂತ ಬೇರೆ ಯಾವುದೇ ಸ್ಪಷ್ಟೀಕರಣದ ಅಗತ್ಯವಿಲ್ಲ ಎಂದು ಹೇಳಿದರು. ಈ ಸಂದರ್ಭ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿ, ಪ್ರಧಾನಿಯೇ ಸದನಕ್ಕೆ ಬಂದು ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದಾಗ ಸದನದಲ್ಲಿ ಕೋಲಾಹಲದ ಸ್ಥಿತಿ ಉಂಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News