ಯುವತಿಯ ಹೊಟ್ಟೆಯಿಂದ 1.5 ಕೆಜಿ ಆಭರಣಗಳು, 90 ನಾಣ್ಯಗಳನ್ನು ಹೊರತೆಗೆದ ವೈದ್ಯರು!

Update: 2019-07-25 07:39 GMT

ಕೊಲ್ಕತ್ತಾ, ಜು.25: ಪಶ್ಚಿಮ ಬಂಗಾಳದ ರಾಮಪುರ್ಹಟ್ ಎಂಬಲ್ಲಿನ ಸರಕಾರಿ ಆಸ್ಪತ್ರೆಯ ವೈದ್ಯರು ಮಾನಸಿಕ ಅಸ್ವಸ್ಥ ಯುವತಿಯೊಬ್ಬಳ ಹೊಟ್ಟೆಯಿಂದ 1.5 ಕೆಜಿ ತೂಕದ ಆಭರಣಗಳು ಹಾಗೂ ನಾಣ್ಯಗಳನ್ನು ಹೊರ ತೆಗೆದಿದ್ದಾರೆ.

ಐದು ಹಾಗೂ 10 ರೂಪಾಯಿ ಮೌಲ್ಯದ 90 ನಾಣ್ಯಗಳು ಹಾಗೂ ಸರಗಳು, ಮೂಗುತಿ, ಕಿವಿಯೋಲೆಗಳು, ಬಳೆಗಳು, ಗೆಜ್ಜೆ, ಬ್ರೇಸ್ಲೆಟ್ ಹೀಗೆ ಹಲವಾರು ವಿಧದ ಆಭರಣಗಳನ್ನು ಆಕೆಯ ಹೊಟ್ಟೆಯೊಳಗಿನಿಂದ ಹೊರತೆಗೆಯಲಾಗಿದೆ ಎಂದು  ರಾಮಪುರ್ಹಟ್ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ ಸಿದ್ಧಾರ್ಥ್ ಬಿಸ್ವಾಸ್ ಹೇಳಿದ್ದಾರೆ. ಹೆಚ್ಚಿನ ಆಭರಣಗಳು ತಾಮ್ರದ್ದಾಗಿದ್ದರೆ ಕೆಲವು ಚಿನ್ನದ ಆಭರಣಗಳೂ ಇದ್ದವು ಎಂದು ವೈದ್ಯರು ತಿಳಿಸಿದ್ದಾರೆ.

ತಮ್ಮ ಮನೆಯಲ್ಲಿನ ಆಭರಣಗಳು ಒಂದೊಂದಾಗಿಯೇ  ಕಾಣೆಯಾಗುತ್ತಿರುವುದನ್ನು 26 ವರ್ಷದ ಈ ಯುವತಿಯ ತಾಯಿ ಗಮನಿಸಿದ್ದರೂ ಅವುಗಳೆಲ್ಲವನ್ನೂ ಮಗಳು ನುಂಗಿದ್ದಾಳೆಂದು ಆಕೆ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ.

``ನನ್ನ ಪುತ್ರಿ ಮಾನಸಿಕ ಅಸ್ವಸ್ಥೆ. ಕಳೆದ ಕೆಲ ದಿನಗಳಿಂದ ಊಟವಾದ ನಂತರ  ವಾಂತಿ ಮಾಡುತ್ತಿದ್ದಳು. ಮನೆಯಲ್ಲಿನ ಆಭರಣಗಳು ಕಾಣೆಯಾಗುತ್ತಿರುವ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ ಅಳುತ್ತಿದ್ದಳು'' ಎಂದು ಆಕೆ ತಿಳಿಸಿದ್ದಾರೆ.

ಪುತ್ರಿಯ ಮೇಲೆ ನಿಗಾ ಇಟ್ಟಿದ್ದರೂ ಯಾರೂ ನೋಡದೇ ಇದ್ದಾಗ ಘನ ವಸ್ತುಗಳನ್ನು ನುಂಗುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದು, ಆಕೆಯನ್ನು ಹಲವಾರು ವೈದ್ಯರ ಬಳಿ ಕೊಂಡು ಹೋಗಿ ಚಿಕಿತ್ಸೆ ನೀಡಿದ್ದರೂ ಗುಣವಾಗಿರಲಿಲ್ಲ ಎಂದು ಯುವತಿಯ ತಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News