ಮುಝಫ್ಫರನಗರ ಗಲಭೆ: ಹತ್ಯೆಗೀಡಾದ ಸೋದರರು ಚಾರಿತ್ರ್ಯಹೀನರಾಗಿದ್ದರು ಎಂದ ಆದಿತ್ಯನಾಥ್!

Update: 2019-07-25 09:36 GMT

ಪಾಟ್ನಾ, ಜು.25: ಮುಝಫ್ಪರನಗರದಲ್ಲಿ 2013ರಲ್ಲಿ ನಡೆದ ಗಲಭೆಗಳಲ್ಲಿ ಹತ್ಯೆಗೀಡಾದ ಇಬ್ಬರು ಸೋದರರು ಚಾರಿತ್ರ್ಯಹೀನರಾಗಿದ್ದರು ಹಾಗೂ ಅವರಿಗೂ ಮತೀಯ ಹಿಂಸಾಚಾರಕ್ಕೂ ಸಂಬಂಧವಿರಲಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.

ಈ ಇಬ್ಬರಾದ ನವಾಬ್ ಹಾಗೂ ಶಹೀದ್ ಮನೆ ಮನೆಗೆ ಹಾಲು ಮಾರಾಟ ಮಾಡುತ್ತಿದ್ದರು ಹಾಗೂ ನವಾಬ್  ಗ್ರಾಮಸ್ಥರೊಬ್ಬರ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಕರಣದ ಆರೋಪಿಗಳು ತಪ್ಪೊಪ್ಪಿಕೊಂಡ ನಂತರ ಈ ಸೋದರರ ಕೊಲೆಗೆ ಬಳಸಲಾದ ದೇಶೀಯ ನಿರ್ಮಿತ ಪಿಸ್ತೂಲು ಹಾಗೂ ಬಕೆಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು.  ಈ ತಪ್ಪೊಪ್ಪಿಗೆ ಹೇಳಿಕೆ ಆಧಾರದಲ್ಲಿಯೇ ಚಾರ್ಜ್ ಶೀಟ್ ಹಾಗೂ ಪೂರಕ ಜಾರ್ಚ್ ಶೀಟ್  ಸಲ್ಲಿಸಲಾಗಿತ್ತು ಎಂದು ಹೇಳಿದ ಮುಖ್ಯಮಂತ್ರಿ ಈ ಹತ್ಯೆಗೂ ದಂಗೆಗಳಿಗೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ಸೋದರರ ಕೊಲೆ ಪ್ರಕರಣದಲ್ಲಿನ ಸಾಕ್ಷಿಗಳನ್ನು ರಕ್ಷಿಸಲು ಸರಕಾರ ಕೈಗೊಂಡ ಕ್ರಮಗಳ ಕುರಿತಂತೆ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಳಂಕಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಿದ್ದರು. ಈ ಇಬ್ಬರು ಸೋದರರ ಇನ್ನೊಬ್ಬ ಸೋದರ ಅಸ್ಬಬ್ ಎಂಬಾತ ಕೂಡ ಮಾರ್ಚ್ 11ರಂದು ಹತ್ಯೆಗೀಡಾದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು.

ಪ್ರಕರಣದಲ್ಲಿ ಗುರುತಿಸಲಾದ ಏಳು ಆರೋಪಿಗಳ ಪೈಕಿ  ವಾಸು ಎಂಬಾತನನ್ನು ಬಂಧಿಸಲಾಗಿದ್ದರೆ, ಉಳಿದವರಾದ ಭೋಲು, ಶ್ರೀಕಾಂತ್, ಅಜಿತ್, ಮಂಜಿತ್ ಹಾಗೂ ಮೊಂಟಿ ಶರಣಾಗಿದ್ದರು. ಏಳನೇ ಆರೋಪಿ ಸಹದೇವ್ ವಿರುದ್ಧ ಕೂಡ ಕ್ರಿಮಿನಲ್ ದಂಡ ಸಂಹಿತೆಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News