ಸಮ್ಲೇಟಿ ಸ್ಫೋಟ ಪ್ರಕರಣ: “ನಾವು ಕಳೆದುಕೊಂಡ 23 ವರ್ಷಗಳನ್ನು ಮರಳಿಸುವವರು ಯಾರು?”

Update: 2019-07-25 11:31 GMT
Photo: indianexpress.com

►9ನೆ ತರಗತಿಯಲ್ಲಿದ್ದಾಗ ಬಂಧನವಾಗಿದ್ದ ನಾಸಿರ್ ಗೆ ಈಗ 39 ವರ್ಷ

ಆ ಐವರೂ ಬರೋಬ್ಬರಿ 23 ವರ್ಷಗಳ ನಂತರ ಮಂಗಳವಾರ ರಾಜಸ್ಥಾನದ ಜೈಪುರ ಸೆಂಟ್ರಲ್ ಜೈಲಿನಿಂದ ಬಂಧಮುಕ್ತಗೊಂಡಿದ್ದಾರೆ. ಸೋಮವಾರ ರಾಜಸ್ಥಾನ ಉಚ್ಚ ನ್ಯಾಯಾಲಯವು 1996ರ ಸಮ್ಲೇಟಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿತ್ತು.

1996 ಮೇ 22ರಂದು ಜೈಪುರ-ಆಗ್ರಾ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ದೌಸಾ ಜಿಲ್ಲೆಯ ಸಮ್ಲೇಟಿ ಗ್ರಾಮದ ಬಳಿ ತಲುಪುತ್ತಿದ್ದಂತೆ ಭೀಕರ ಬಾಂಬ್ ಸ್ಫೋಟಕ್ಕೆ ಗುರಿಯಾಗಿತ್ತು. ಈ ದುರಂತದಲ್ಲಿ 14 ಜನರು ಸಾವನ್ನಪ್ಪಿದ್ದು, 37 ಜನರು ಗಾಯಗೊಂಡಿದ್ದರು. 2014ರಲ್ಲಿ ವಿಚಾರಣಾ ನ್ಯಾಯಾಲಯವು ಪ್ರಮುಖ ಆರೋಪಿ ಡಾ.ಅಬ್ದುಲ್ ಹಮೀದ್‌ ಗೆ ಮರಣದಂಡನೆಯನ್ನು ಮತ್ತು ಇತರ ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

ಇದೀಗ ರಾಜಸ್ಥಾನ ಉಚ್ಚ ನ್ಯಾಯಾಲಯವು ಅಬ್ದುಲ್ ಹಮೀದ್‌ ನ ಮರಣದಂಡನೆ ಮತ್ತು ಪಪ್ಪು ಅಲಿಯಾಸ್ ಸಲೀಮ್‌ ನ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಉಳಿದ ಆರು ಜನರನ್ನು ಖುಲಾಸೆಗೊಳಿಸಿದೆ.

ಈ ಪೈಕಿ ಜಾವೇದ್ ಖಾನ್ ಎಂಬಾತ ಸಮ್ಲೇಟಿ ಸ್ಫೋಟಕ್ಕೆ ಒಂದು ದಿನ ಮೊದಲು ದಿಲ್ಲಿಯ ಲಜಪತ್ ನಗರದಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಯಾಗಿ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದರೆ, ಲತೀಫ್ ಅಹ್ಮದ್ ಬಾಜಾ (42), ಅಲಿ ಭಟ್ (48), ಮಿರ್ಝಾ ನಾಸಿರ್ (39), ಅಬ್ದುಲ್ ಗನಿ(57) ಮತ್ತು ರಯೀಸ್ ಬೇಗ್(56) ಅವರನ್ನು ಮಂಗಳವಾರ ಸಂಜೆ ಜೈಪುರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ಬೇಗ್ 1997, ಜೂ.8ರಿಂದ ಬಂಧನದಲ್ಲಿದ್ದರೆ, ಇತರರನ್ನು 1996ರ ಜೂ.17 ಮತ್ತು 1996ರ ಜು.27ರ ನಡುವೆ ಬಂಧಿಸಲಾಗಿತ್ತು. 23 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುತ್ತಿದ್ದ ಇವರಿಗೆ ಎಂದೂ ಪೆರೋಲ್ ಅಥವಾ ಜಾಮೀನು ಸಿಕ್ಕಿರಲಿಲ್ಲ. ಒಳಸಂಚು ನಡೆದಿತ್ತು ಎನ್ನುವುದಕ್ಕೆ ಸಾಕ್ಷಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲಗೊಂಡಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ಉಚ್ಚ ನ್ಯಾಯಾಲಯವು, ಈ ಆರು ಜನರು ಮತ್ತು ಮುಖ್ಯ ಆರೋಪಿ ಅಬ್ದುಲ್ ಹಮೀದ್ ನಡುವೆ ಯಾವುದೇ ಸಂಪರ್ಕ ಇತ್ತು ಎನ್ನುವುದನ್ನು ಸಾಬೀತುಗೊಳಿಸಲು ಪ್ರಾಸಿಕ್ಯೂಷನ್‌ ಗೆ ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಂಗಳವಾರ ಬಿಡುಗಡೆಗೊಂಡ ಐವರೂ ಸಿಐಡಿ ಪೊಲೀಸರು ಪ್ರಕರಣದಲ್ಲಿ ತಮ್ಮನ್ನು ಆರೋಪಿಗಳನ್ನಾಗಿ ಮಾಡುವವರೆಗೆ ತಮಗೆ ಪರಸ್ಪರ ಪರಿಚಯವೇ ಇರಲಿಲ್ಲ ಎಂದು ಹೇಳಿದರು. ಬೇಗ್ ಆಗ್ರಾ ನಿವಾಸಿಯಾಗಿದ್ದರೆ, ಗನಿ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯ ನಿವಾಸಿಯಾಗಿದ್ದಾನೆ. ಇತರ ಮೂವರು ಶ್ರೀನಗರದವರಾಗಿದ್ದಾರೆ. ಜೈಲು ಸೇರುವ ಮುನ್ನ ಬಾಜಾ ದಿಲ್ಲಿ ಮತ್ತು ಕಠ್ಮಂಡುಗಳಲ್ಲಿ ಕಾಶ್ಮೀರಿ ಕರಕುಶಲ ವಸ್ತುಗಳ ಮಾರಾಟ ಮಾಡುತ್ತಿದ್ದ. ನಿಸಾರ್ ಆಗಿನ್ನೂ ಒಂಭತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ. ಗನಿ ಶಾಲೆಯೊಂದನ್ನು ನಡೆಸುತ್ತಿದ್ದ.

‘ನಾವು ಕಾಲಿಡುತ್ತಿರುವ ಜಗತ್ತು ಹೇಗಿದೆ ಎಂಬ ಯಾವುದೇ ಕಲ್ಪನೆ ನಮಗಿಲ್ಲ’ ಎಂದು ಹೇಳಿದ ಗನಿ, ‘ನಾವು ಜೈಲಿನಲ್ಲಿದ್ದಾಗಲೇ ನಮ್ಮ ಬಂಧುಗಳನ್ನು ಕಳೆದುಕೊಂಡಿದ್ದೇವೆ. ನನ್ನ ತಂದೆ ಮತ್ತು ತಾಯಿ, ಇಬ್ಬರು ಚಿಕ್ಕಪ್ಪಂದಿರು ನಿಧನರಾಗಿದ್ದಾರೆ. ನಮಗೇನೋ ಬಿಡುಗಡೆಯಾಗಿದೆ, ಆದರೆ ನಾವು ಕಳೆದುಕೊಂಡಿರುವ ನಮ್ಮ ಯೌವನದ ವರ್ಷಗಳನ್ನು ಮರಳಿಸುವವರು ಯಾರು?’ ಎಂದು ಅಳಲು ತೋಡಿಕೊಂಡರು. ಬೇಗ್ ಜೈಲಿಗೆ ಸೇರಿದ ಬಳಿಕ ಆತನ ಸೋದರಿಗೆ ಮದುವೆಯಾಗಿದ್ದು, ಶೀಘ್ರವೇ ಆಕೆಯ ಪುತ್ರಿಯ ಮದುವೆ ನಡೆಯಲಿದೆ.

ಗನಿ ಜೈಲಿನಿಂದ ಹೊರಗಡಿಯಿಡುತ್ತಿದ್ದಂತೆ ಇಬ್ಬರು ಆತನನ್ನು ತಬ್ಬಿಕೊಂಡು ರೋದಿಸತೊಡಗಿದ್ದರು. ಒಬ್ಬರು ಅವರ ಪುತ್ರ ರಿಝ್ವಾನ್ ಆಗಿದ್ದರೆ, ಇನ್ನೋರ್ವ ಸೋದರ ಸಲೀಂ ಆಗಿದ್ದ. ಈ ಎಲ್ಲ ವರ್ಷಗಳಲ್ಲಿ ನಾವು ಭರವಸೆಯನ್ನೇ ಕಳೆದುಕೊಂಡಿದ್ದೆವು ಎಂದು ಸಲೀಂ ಕಂಬನಿಯನ್ನು ತಡೆಯಲು ಪ್ರಯತ್ನಿಸುತ್ತ ಹೇಳಿದ .

ಕಳೆದ ರಾತ್ರಿ ಊಟ ಅಥವಾ ನಿದ್ರೆಯನ್ನು ಮಾಡಲೂ ನಮಗೆ ಸಾಧ್ಯವಾಗಿರಲಿಲ್ಲ. ನಿರೀಕ್ಷೆ ಮತ್ತು ಕಾಗದ ಪತ್ರಗಳ ಕೆಲಸ, ಇವೆಲ್ಲ ಎಂದಿಗೂ ಮುಗಿಯುವುದೇ ಅಲ್ಲ ಎಂದು ನಮಗನ್ನಿಸಿತ್ತು ಎಂದು ನಿಸಾರ್ ಹೇಳಿದರು. ತನ್ನನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿದಾಗ ತನಗೆ ಕೇವಲ 16 ವರ್ಷವಾಗಿತ್ತು, ಆದರೆ ಅಧಿಕಾರಿಗಳು ತನ್ನ ವಯಸ್ಸನ್ನು 19 ವರ್ಷ ಎಂದು ತೋರಿಸಿದ್ದರು ಎಂದು ಈಗ 39ರ ಹರೆಯದ ನಿಸಾರ್ ಹೇಳುತ್ತಾರೆ. ತಾನೀಗ ಮದುವೆಯಾಗಲು ಮತ್ತು ಬದುಕನ್ನು ಹೊಸದಾಗಿ ಆರಂಭಿಸಲು ಬಯಸಿದ್ದೇನೆ ಎಂದವರು ಹೇಳಿದ್ದಾರೆ.

ಬಾಜಾಗೂ ಮದುವೆಯಾಗಿಲ್ಲ. ತನ್ನ ಬೋಳುತಲೆಯನ್ನು ಬೆಟ್ಟು ಮಾಡಿದ ಅವರು, ತನಗೆ ಮದುವೆಗೆ ಹೆಣ್ಣು ಸಿಕ್ಕರೆ ಅದೇ ದೊಡ್ಡ ವಿಷಯ ಎಂದು ಲಘುವಾಗಿ ಹೇಳಿದರು. ಬಂಧುಗಳೊಂದಿಗೆ ಮಾತನಾಡಲು ಜೊತೆಯಲ್ಲಿದ್ದವರು ಸೆಲ್ ಫೋನ್‌ ಗಳನ್ನು ನೀಡಿದ್ದರಾದರೂ ಇಷ್ಟೆಲ್ಲ ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುತ್ತಿದ್ದ ಅವರಿಗೆ ಅದನ್ನು ಬಳಸಲು ಇನ್ನೊಬ್ಬರ ನೆರವು ಅಗತ್ಯವಾಗಿತ್ತು. ಈ ಪೈಕಿ ನಾಲ್ವರು ತಮ್ಮನ್ನು ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಕಚೇರಿಗೆ ತೆರಳಿದರು.

ಇವರಿಗೆ ಆಹಾರ ನೀಡಲಾಗಿತ್ತಾದರೂ ಸ್ವಾತಂತ್ರ್ಯ ದೊರೆತ ಸಂಭ್ರಮದಲ್ಲಿದ್ದ ಅವರ್ಯಾರಿಗೂ ಹಸಿವೆಯೇ ಇರಲಿಲ್ಲ. ಬಾಜಾಗಂತೂ ತಾವು ಬಿಡುಗಡೆಗೊಂಡಿದ್ದೇವೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಜೈಲಿನಲ್ಲಿ ಬಾಜಾ ಮತ್ತು ನಿಸಾರ್ ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರೆ, ಭಟ್ ಎರಡು ಬಾರಿ ಕುರ್‌ ಆನ್ ಪ್ರತಿಗಳನ್ನು ಬರೆದಿದ್ದರು. ಈ ಪೈಕಿ ಒಂದನ್ನು ಶ್ರೀನಗರದಲ್ಲಿರುವ ತನ್ನ ಮನೆಗೆ ಕಳುಹಿಸಿದ್ದರು.

“ನನ್ನ ತಮ್ಮನ ಯೌವನವು ಕಳೆದುಹೋಯಿತು. ನಮ್ಮ ಹೆತ್ತವರು ಇನ್ನಿಲ್ಲವಾದರು. ನನ್ನ ಕಣ್ಣೀರು ಬತ್ತಿದೆ ಮತ್ತು ಆತನಿಗಾಗಿ ಅಳುತ್ತಲೇ ನಾನು ವೃದ್ಧೆಯಾದೆ’’ ಎಂದು ಜಮ್ಮುವಿನಿಂದ ದೂರವಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗನಿಯವರ ಸೋದರಿ ಸುರೈಯಾ (62) ಹೇಳಿದರು. ನಿನ್ನೆಯಿಂದ ನನ್ನ ಹೃದಯ ಬಡಿತ ಹೆಚ್ಚಾಗಿದೆ. ಒಂದೆರಡು ದಿನಗಳ ಸಮಯ ಕೊಡಿ. ಗನಿ ಒಮ್ಮೆ ಮನೆಗೆ ಬರಲಿ,  ನಾನು ನಿಮಗೆ ಎಲ್ಲವನ್ನು ಹೇಳುತ್ತೇನೆ” ಎಂದರು.

Writer - ಹಂಝ ಖಾನ್, indianexpress.com

contributor

Editor - ಹಂಝ ಖಾನ್, indianexpress.com

contributor

Similar News