ಹೆತ್ತವರ ಪೈಕಿ ಒಬ್ಬರ ಪೌರತ್ವ ವಿವಾದದಲ್ಲಿದ್ದರೂ ಎನ್‌ಆರ್‌ಸಿಯಲ್ಲಿ ಮಕ್ಕಳ ಸೇರ್ಪಡೆಯಿಲ್ಲ: ಸುಪ್ರೀಂ

Update: 2019-07-25 14:54 GMT

ಹೊಸದಿಲ್ಲಿ,ಜು.25: ಡಿಸೆಂಬರ್ 3,2004 ರಂದು ಅಥವಾ ನಂತರ ಜನಿಸಿದ ಮಕ್ಕಳ ತಂದೆ ಅಥವಾ ತಾಯಿ ಅಸ್ಸಾಮಿನ ಮತದಾರರ ಪಟ್ಟಿಯಲ್ಲಿ ಶಂಕಾಸ್ಪದ ಮತದಾರ ಎಂದು ಗುರುತಿಸಲ್ಪಟ್ಟಿದ್ದರೆ,ನ್ಯಾಯಾಧಿಕರಣದಿಂದ ವಿದೇಶಿ ಪ್ರಜೆ ಎಂದು ಘೋಷಿಸಲ್ಪಟ್ಟಿದ್ದರೆ ಅಥವಾ ವಿದೇಶಿಯರ ನ್ಯಾಯಾಧಿಕರಣದಲ್ಲಿ ತನ್ನ ಪೌರತ್ವಕ್ಕೆ ಸಂಬಂಧಿಸಿದಂತೆ ತಗಾದೆಯನ್ನು ಹೊಂದಿದ್ದರೆ ಅಂತಹ ಮಕ್ಕಳ ಹೆಸರುಗಳನ್ನು ಅಂತಿಮ ಪರಿಷ್ಕೃತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯಲ್ಲಿ ಸೇರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಜು.23ರ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಎನ್‌ಆರ್‌ಸಿ ಪರಿಷ್ಕರಣೆ ಮತ್ತು ಅಸ್ಸಾಂ ಒಪ್ಪಂದಕ್ಕೆ ಸಂಬಂಧಿಸಿದ ಇತರ ಹಲವಾರು ವಿಷಯಗಳು ಹಾಗೂ ಎನ್‌ಆರ್‌ಸಿ ಪರಿಷ್ಕರಣೆಗೆ 1971,ಮಾ.24ರ ಅರ್ಹತಾ ದಿನಾಂಕ ಕುರಿತು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾ. ನಾರಿಮನ್ ಅವರ ಪೀಠವು,ಅಂತಿಮ ಎನ್‌ಆರ್‌ಸಿಯ ಪ್ರಕಟಣೆಗೆ ಅಂತಿಮ ಗಡುವನ್ನೂ ಜು.31ರಿಂದ ಆ.31ಕ್ಕೆ ವಿಸ್ತರಿಸಿ ಆದೇಶಿಸಿದೆ.

ಅರ್ಜಿದಾರರು ಕೋರಿರುವ ಸ್ಪಷ್ಟನೆಯನ್ನು ಪ್ರಸ್ತಾಪಿಸಿದ ಪೀಠವು,1055ರ ಪೌರತ್ವ ಕಾಯ್ದೆಯ 3(1)ಬಿ ಮತ್ತು ಸಿ ಕಲಮ್‌ಗಳಲ್ಲಿಯ ನಿಬಂಧನೆಗಳಿಗೆ ಅನುಗುಣವಾಗಿ ತನ್ನ 2018,ಜು.2ರ ಆದೇಶವು ತಾನು 2004,ಡಿ.3ರ ದಿನಾಂಕವನ್ನು ನಿಗದಿಗೊಳಿಸಲು ಕಾರಣವಾಗಿದೆ ಎಂದು ತಿಳಿಸಿದೆ.

ಇಂತಹ ಪ್ರಕರಣಗಳಲ್ಲಿ 2004,ಡಿ.3ರ ಬದಲು 1971,ಮಾ.24ನ್ನು ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಲು ಪೌರತ್ವ ಕಾಯ್ದೆಯ ಕಲಂ 3ರ ತಿದ್ದುಪಡಿಗೆ ಪ್ರಬಜನ್ ವಿರೋಧಿ ಮಂಚ್(ಪಿವಿಎಂ)ನಂತಹ ಅಸ್ಸಾಮಿನಲ್ಲಿಯ ವಲಸೆ ವಿರೋಧಿ ಸಂಘಟನೆಗಳು ಆಗ್ರಹಿಸುತ್ತಿವೆ. 2004ರ ದಿನಾಂಕವು ಬಾಂಗ್ಲಾದೇಶಿ ವಲಸಿಗರನ್ನು ಕಾನೂನುಬದ್ಧಗೊಳಿಸು ತ್ತದೆ ಮತ್ತು 2040ರ ವೇಳೆಗೆ ರಾಜ್ಯದಲ್ಲಿ ಮೂಲನಿವಾಸಿಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡುತ್ತದೆ ಎನ್ನುವುದು ಪಿವಿಎಂ ವಾದವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News