ಶಿವಸೇನೆ ಸೇರಿದ ಎನ್‌ಸಿಪಿಯ ಸಚಿನ್ ಅಹಿರ್

Update: 2019-07-25 17:35 GMT

ಮುಂಬೈ, ಜು. 25: ಎನ್‌ಸಿಪಿ ನಾಯಕ ಸಚಿನ್ ಅಹಿರ್ ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ ಹಾಗೂ ಅವರ ಪುತ್ರ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಗುರುವಾರ ಶಿವಸೇನೆ ಸೇರಿದ್ದಾರೆ. ಎನ್‌ಸಿಪಿಯ ಮುಂಬೈ ವರಿಷ್ಠರಾಗಿದ್ದ ಅಹಿರ್ ಮಾಜಿ ಸಚಿವ ಹಾಗೂ ಮಾಜಿ ಶಾಸಕ. ಉದ್ಧವ್ ಠಾಕ್ರೆ ಅವರ ಮಾರ್ಗದರ್ಶನದಲ್ಲಿ ಆದಿತ್ಯ ಠಾಕ್ರೆ ಮಾಡುತ್ತಿರುವ ಉತ್ತಮ ಕೆಲಸಗಳಿಂದ ತಾನು ಪ್ರಭಾವಿತನಾದೆ ಎಂದು ಅಹಿರ್ ಹೇಳಿದ್ದಾರೆ.

ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ‘‘ನಾನು ಶರದ್ ಪವಾರ್ ಅವರನ್ನು ಭೇಟಿಯಾಗಿದ್ದೇನೆ. ವರ್ಲಿ ಕ್ಷೇತ್ರದ ಪ್ರಸಕ್ತ ಪರಿಸ್ಥಿತಿ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ. ಇತರ ವಿಚಾರಗಳ ಬಗ್ಗೆ ನನಗೆ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಒಂದೆಡೆ ನಾನು ಸಂತೋಷವಾಗಿದ್ದೇನೆ. ಆದರೆ, ಎನ್‌ಸಿಪಿ ಹಿರಿಯ ನಾಯಕರು ನೀಡಿದ ನೆರವನ್ನು ಮರೆಯಲು ಸಾಧ್ಯವಿಲ್ಲ’’ ಎಂದರು.

ಇನ್ನೋರ್ವ ಎನ್‌ಸಿಪಿ ನಾಯಕ ಛಗನ್ ಭುಜ್‌ಬಲ್ ಕೂಡ ಶಿವಸೇನೆ ಸೇರುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ, ಭುಜ್‌ಬಲ್ ಈ ವರದಿಗಳನ್ನು ನಿರಾಕರಿಸಿದ್ದಾರೆ. ನಾನು ಎಲ್ಲಿಯೂ ಹೋಗುತ್ತಿಲ್ಲ. ನಾನು ಎಲ್ಲಿದ್ದೇನೆ, ಅಲ್ಲಿಯೇ ಇರಲಿದ್ದೇನೆ. ಎಲ್ಲ ಸುದ್ದಿಗಳು ಆಧಾರ ರಹಿತ ಹಾಗೂ ಸುಳ್ಳು ಎಂದು ಅವರು ಹೇಳಿದ್ದಾರೆ. ಭುಜ್‌ಬಲ್ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ. 1960ರಲ್ಲಿ ಶಿವಸೇನೆ ಸೇರುವ ಮೂಲಕ ಅವರು ತನ್ನ ರಾಜಕೀಯ ಜೀವನ ಆರಂಭಿಸಿದ್ದರು. ಅನಂತರ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು ಎನ್‌ಸಿಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News