ಟಿಎಂಸಿ ಬೆಂಬಲಿಗರಿಂದ ಅಧ್ಯಾಪಕರಿಗೆ ಥಳಿತ

Update: 2019-07-25 17:37 GMT

ಕೋಲ್ಕತಾ, ಜು. 25: ‘ಮಮತಾ ಬ್ಯಾನರ್ಜಿ ಜಿಂದಾಬಾದ್’, ‘ತೃಣಮೂಲ ಜಿಂದಾಬಾದ್’ ಎಂದು ಘೋಷಣೆ ಕೂಗುವಂತೆ ಸ್ನಾತಕೋತ್ತರ ವಿದ್ಯಾರ್ಥಿನಿಯರನ್ನು ಬಲವಂತಪಡಿಸುವ ಸಂದರ್ಭ ಮಧ್ಯಪ್ರವೇಶಿಸಿದ ಪ್ರಾಧ್ಯಾಪಕರಿಗೆ ವಿದ್ಯಾರ್ಥಿ ಒಕ್ಕೂಟ ತೃಣಮೂಲ ಛಾತ್ರ ಪರಿಷದ್‌ನ ಸದಸ್ಯರು ಥಳಿಸಿದ ಘಟನೆ ಪಶ್ಚಿಮಬಂಗಾಳದ ಹೂಗ್ಲಿಯ ಕಾಲೇಜೊಂದರ ಕ್ಯಾಂಪಸ್‌ನಲ್ಲಿ ಬುಧವಾರ ನಡೆದಿದೆ.

ಕೊನ್ನಾಗರ್‌ನ ನಬಗ್ರಾಮ್ ಹೀರಾಲಾಲ್ ಪೌಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಂಗಾಲಿ ಬೋಧಿಸುತ್ತಿರುವ ಸುಬ್ರತಾ ಚಟರ್ಜಿ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ನಾತಕೋತ್ತರ ವಿದ್ಯಾರ್ಥಿಗಳ ಗುಂಪೊಂದು ತೃಣಮೂಲ ಛಾತ್ರ ಪರಿಷದ್ ಕಾಲೇಜು ಘಟಕದ ಸದಸ್ಯರು ಹಾಗೂ ನಾಯಕರಾಗಿರುವ ಪದವಿಯ ಕೆಲವು ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯರನ್ನು ಕೊಠಡಿಯೊಳಗೆ ಕೂಡಿ ಹಾಕಲಾಗಿತ್ತು. ಅದ್ಯಾಪಕರ ಮಧ್ಯಪ್ರಪೇಶದ ಬಳಿಕ ಎರಡೂ ತಂಡದವರು ಪರಸ್ಪರ ಕ್ಷಮೆ ಯಾಚಿಸಿ ವಿವಾದ ಅಂತ್ಯಗೊಳಿಸಸಲು ನಿರ್ಧರಿಸಲಾಯಿತು. ಆದರೆ, ಚರ್ಚೆಯ ಸಂದರ್ಭ ತೃಣಮೂಲ ಛಾತ್ರ ಪರಿಷದ್‌ನ ಬೆಂಬಲಿಗರು (ಪದವಿ ವಿದ್ಯಾರ್ಥಿಗಳು) ಸ್ನಾತಕೋತ್ತರ ವಿದ್ಯಾರ್ಥಿಗಳು ‘ಮಮತಾ ಬ್ಯಾನರ್ಜಿ ಜಿಂದಾಬಾದ್’, ‘ತೃಣಮೂಲ ಜಿಂದಾಬಾದ್’ ಎಂದು ಘೋಷಣೆ ಕೂಗುವಂತೆ ಆಗ್ರಹಿಸಿದರು. ಇದಕ್ಕೆ ಕೆಲವು ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭ ತೃಣಮೂಲ ಛಾತ್ರ ಪರಿಷದ್‌ನ ಬೆಂಬಲಿಗರು ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಥಳಿಸಲು ಯತ್ನಿಸಿದರು. ಈ ವಿದ್ಯಾರ್ಥಿಗಳನ್ನು ತಡೆಯಲು ಯತ್ನಿಸಿದ ಸಂದರ್ಭ ನನ್ನನ್ನು ಗುರಿಯಾಗಿರಿಸಿ ಹಲ್ಲೆ ನಡೆಸಲಾಯಿತು ಎಂದು ಚಟರ್ಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News