ಜು.28ರಂದು ಮಂಗಳೂರಿನಲ್ಲಿ ‘ಡ್ರೈವ್ ಡೇ’ ಆಚರಣೆಗೆ ಜಿಲ್ಲಾಧಿಕಾರಿ ನಿರ್ಧಾರ

Update: 2019-07-26 08:53 GMT

# ಬೆಳಗ್ಗೆ 10ರಿಂದ 11 ಗಂಟೆಯವರೆಗೆ ‘ಲಾರ್ವಾ ಬೇಟೆ’!

ಮಂಗಳೂರು, ಜು.25: ದ.ಕ. ಜಿಲ್ಲೆಯಲ್ಲಿ ಬಹುಮುಖ್ಯವಾಗಿ ಮಂಗಳೂರು ನಗರವನ್ನು ಕಾಡುತ್ತಿರುವ ಸಾಂಕ್ರಾಮಿಕ ರೋಗವಾದ ಡೆಂಗ್ ಸಂಪೂರ್ಣ ನಿಯಂತ್ರಣಕ್ಕೆ ಸಂಬಂಧಿಸಿ ಸೊಳ್ಳೆಗಳ ಲಾರ್ವಾ ನಾಶಕ್ಕೆ ವಿಶೇಷ ಒತ್ತು ನೀಡಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನಗರದಲ್ಲಿ ರವಿವಾರ (ಜು.28) 'ಡ್ರೈವ್ ಡೇ' ಆಚರಿಸಲು ನಿರ್ಧರಿಸಿದ್ದಾರೆ. ಈ ದಿನ ಬೆಳಗ್ಗೆ 10 ಗಂಟೆಯಿಂದ 11ರವರೆಗೆ ಸಾರ್ವಜನಿಕರೆಲ್ಲರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನಲ್ಲಿ ತೆರೆದ ಪ್ರದೇಶ ಹಾಗೂ ವಸ್ತುಗಳಲ್ಲಿ ಸಂಗ್ರಹವಾಗಿರುವ ಎಲ್ಲಾ ನೀರನ್ನು ಬರಿದು ಮಾಡಿ ಸ್ವಚ್ಛಗೊಳಿಸುವ ಜತೆಗೆ ಆ ಸ್ಥಳಗಳಲ್ಲಿರುವ ಲಾರ್ವಾ (ಸೊಳ್ಳೆಯ ಮೊಟ್ಟೆ)ವನ್ನು ಪತ್ತೆ ಹಚ್ಚಿ ನಾಶ ಮಾಡುವಂತೆ ಜಿಲ್ಲಾಧಿಕಾರಿ ಮಾಧ್ಯಮ ಸಂವಾದದ ಮೂಲಕ ಮನವಿ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಿದ ಅವರು, ಜಿಲ್ಲಾಡಳಿತದ ವತಿಯಿಂದ ಈ ಕಾರ್ಯದಲ್ಲಿ ಸಾರ್ವಜನಿಕರೆಲ್ಲರೂ ಪಾಲ್ಗೊಂಡು ಮನೆಗಳಿಂದ ಸೊಳ್ಳೆಯನ್ನು ಮುಕ್ತಗೊಳಿಸಿ ಡೆಂಗ್ ರೋಗದಿಂದ ರಕ್ಷಿಸಿಕೊಳ್ಳಲು ತಮ್ಮ ಸಹಕಾರವನ್ನು ನೀಡಬೇಕು ಎಂದು ಕೋರಿದರು.

ನಮ್ಮ ಹೋರಾಟವೀಗ ಲಾರ್ವಾ ವಿರುದ್ಧ!

ಸದ್ಯ ನಗರದಲ್ಲಿ ಡೆಂಗ್ ಹಾವಳಿ ಹೆಚ್ಚಿರುವುದರಿಂದ ನಗರದಲ್ಲಿ ರವಿವಾರ 'ಡ್ರೈವ್ ಡೇ' ಆಚರಿಸಲಾಗುವುದು, ಮುಂದೆ ತಾಲೂಕುಗಳಲ್ಲಿಯೂ ಅಭಿಯಾನವನ್ನು ಮುಂದುವರಿಸಲಾಗುವುದು. ಡೆಂಗ್‌ನಂತಹ ಸಾಂಕ್ರಾಮಿಕ ರೋಗವನ್ನು ಹರಡುವ ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಯಾವುದೇ ರೀತಿಯಲ್ಲಿ ಪರಿಹಾರವಲ್ಲ ಎಂಬುದು ಸ್ಪಷ್ಟಗೊಂಡಿದೆ. ಡೆಂಗ್ ನಿಯಂತ್ರಣಕ್ಕೆ ಮುಖ್ಯವಾಗಿ ಸೊಳ್ಳೆಗಳ ಲಾರ್ವಾ ನಾಶವೊಂದೇ ಸದ್ಯದ ಪರಿಹಾರ. ಅದಕ್ಕಾಗಿ ಆ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ಹಾಗೂ ಗಮನಹರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ನಿಂತ ನೀರು ಬರಿದು ಮಾಡಿ ಸ್ವಚ್ಛತೆಗೆ ಸಾರ್ವಜನಿಕರಿಗೆ ಕರೆ

ಸಾರ್ವಜನಿಕರು ಡ್ರೈವ್ ಡೇ ಅವಧಿಯಲ್ಲಿ ತಮ್ಮ ಮನೆಯ ಒಳಗೆ ಹಾಗೂ ಹೊರಗಡೆ ಸೊಳ್ಳೆಗಳ ಲಾರ್ವಾ (ಸ್ವಚ್ಛವಾದ ನೀರಿನಲ್ಲಿ ಕಂಡುಬರುವ ಹುಳ ರೀತಿಯ ಸೊಳ್ಳೆಗಳ ಮೊಟ್ಟೆ)ವನ್ನು ಪತ್ತೆ ಹಚ್ಚಿ ನಾಶಪಡಿಸಬೇಕು. ಹೂವಿನ ಕುಂಡ, ಮನೆಯ ಟೆರೇಸ್, ನೀರು ನಿಂತ ಜಾಗದಲ್ಲಿದ್ದ ನೀರನ್ನು ಬರಿದು ಮಾಡಿ ಸ್ವಚ್ಛಗೊಳಿಸಬೇಕು. ನೀರಿನ ಟ್ಯಾಂಕ್‌ನ ಮುಚ್ಚಳದ ಹೊರ ಆವರಣದಲ್ಲಿಯೂ ನೀರು ನಿಲ್ಲುವ ಜಾಗದಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವುದರಿಂದ ತಮ್ಮ ಮನೆಯ ಒಳಗೆ ಹಾಗೂ ಹೊರಗೆ ಸಂಪೂರ್ಣವಾಗಿ ನಿಗಾ ವಹಿಸಿ ತೆರೆದ ವಾತಾವರಣದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಕರೆ ನೀಡಿದ್ದಾರೆ.

ಡೆಂಗ್‌ನಿಂದ ಸಾವನ್ನಪ್ಪಿದವರಿಗೆ ಪರಿಹಾರಕ್ಕೆ ಮನವಿ

ಸಾಂಕ್ರಾಮಿಕ ರೋಗಗಳಿಂದ ಸಾವನ್ನಪ್ಪಿದವರಿಗೆ ಸರಕಾರದಿಂದ ಈವರೆಗೆ ಯಾವುದೇ ರೀತಿಯ ಪರಿಹಾರವಿಲ್ಲ. ಇತ್ತೀಚೆಗೆ ಜಿಲ್ಲೆಯಲ್ಲಿ ಡೆಂಗ್‌ನಿಂದ ಸಾವನ್ನಪ್ಪಿದ್ದವರಿಗೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂವಾದದಲ್ಲಿ ಎ.ಜೆ. ಆಸ್ಪತ್ರೆಯ ಡೀನ್ ಡಾ. ಅಶೋಕ್ ಹೆಗ್ಡೆ, ಡಾ.ಸಚ್ಚಿದಾನಂದ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿತರಿದ್ದರು.


ಸೊಳ್ಳೆಗಳ ಬಗ್ಗೆ ಇರಲಿ ಎಚ್ಚರ!

ಡೆಂಗ್‌ಗೆ ಕಾರಣವಾದ ಈಡಿಸ್ ಇಜಿಪ್ಟೈ ಸೊಳ್ಳೆ ಮನೆಯೊಳಗಿದ್ದೇ ಮಾನವರನ್ನು, ಪ್ರಾಣಿಗಳನ್ನು ಕಚ್ಚಿ ರೋಗವನ್ನು ಹರಡುತ್ತವೆ. ಅತೀ ಸಣ್ಣ ಪ್ರಮಾಣದ ಸ್ವಚ್ಛ ನೀರಿನಲ್ಲಿ ಮೊಟ್ಟೆ ಇಟ್ಟು ಮರಿ ಹಾಕಿ ಸೋಂಕು ಹರಡುವ ಈ ಸೊಳ್ಳೆಗಳು ಹಗಲು ಹೊತ್ತಿನಲ್ಲೇ ಮನುಷ್ಯರನ್ನು ಕಚ್ಚುತ್ತವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದರು.


ಡೆಂಗ್ ಬಗ್ಗೆ ಜಿಲ್ಲಾಧಿಕಾರಿ ಸಲಹೆ

*ಸೊಳ್ಳೆ ಉತ್ಪತ್ತಿ ತಾಣಗಳನ್ನು ಪತ್ತೆ ಹಚ್ಚಿ ನಾಶಪಡಿಸುವುದು. ಸೊಳ್ಳೆ ಕಚ್ಚದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದು. (ಮೈ ಮುಚ್ಚುವ, ತುಂಬು ತೋಳಿನ ವಸ್ತ್ರಗಳನ್ನು ಧರಿಸುವುದು. ಮನೆಯಲ್ಲಿ ಸಾಂಬ್ರಾಣಿ ಹೊಗೆಯ ಜತೆಗೆ ಮೈಮೇಲೆ ಬೇವಿನ ಎಣ್ಣೆಯಂತಹ ಸೊಳ್ಳೆ ನಿರೋಧಕಗಳನ್ನು ಹಚ್ಚುವುದು).

* ಮನೆ ಸುತ್ತಮುತ್ತ ನಿಂತ ನೀರಿನಲ್ಲಿ ತೇಲುವ ರೀತಿಯ ಹುಳುವೇ ಸೊಳ್ಳೆಗಳ ಲಾರ್ವಾ (ಮೊಟ್ಟೆ). ಕಪ್ಪೆ ಮರಿ, ಮೀನಿನ ಮರಿ ಎಂದೆಲ್ಲಾ ನಾವದನ್ನು ಅಂದುಕೊಂಡಿದ್ದೇವೆ. ವಾಸ್ತವದಲ್ಲಿ ಅದು ಸೊಳ್ಳೆಗಳ ಲಾರ್ವಾ. ಅವುಗಳನ್ನು ನಾಶ ಪಡಿಸುವುದು ನಮ್ಮ ಮುಖ್ಯ ಗುರಿಯಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News