×
Ad

ಬಿಹಾರ ನೆರೆ: ಮೃತರ ಸಂಖ್ಯೆ 123ಕ್ಕೆ ಏರಿಕೆ

Update: 2019-07-26 23:33 IST

ಪಾಟ್ನ, ಜು.26: ಬಿಹಾರದಲ್ಲಿ ಭಾರೀ ಮಳೆಯಿಂದ ಮುಂದುವರಿದಿದ್ದು ನೆರೆಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪಿದೆ. ಶುಕ್ರವಾರದವರೆಗಿನ 24 ಗಂಟೆ ಅವಧಿಯಲ್ಲಿ ಮತ್ತೂ 17 ಮಂದಿ ಸಾವನ್ನಪ್ಪುವುದರೊಂದಿಗೆ ಮಳೆಹಾವಳಿಯಿಂದ ಮೃತಪಟ್ಟವರ ಸಂಖ್ಯೆ 123ಕ್ಕೇರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಾರಿಯ ಮುಂಗಾರು ಅವಧಿಯಲ್ಲಿ ಬಿಹಾರದಲ್ಲಿ ಇದುವರೆಗೆ 482.6 ಮಿಮೀ ಮಳೆಯಾಗಿದೆ. ರಾಜ್ಯದ ಅರಾರಿಯ, ಕಿಶನ್‌ಗಂಜ್, ಮಧುಬನಿ, ಪೂರ್ವ ಚಂಪಾರಣ್, ಸಿತಾಮಡಿ, ಶಿಯೊಹರ್, ಸುಪೌಲ್, ದರ್ಭಾಂಗ, ಮುಝಫ್ಫರ್‌ಪುರ, ಸಹಾರ್ಸ, ಕತಿಹಾರ್ ಮತ್ತು ಪೂರ್ನಿಯಾ ಜಿಲ್ಲೆಗಳಲ್ಲಿ ನೆರೆಹಾವಳಿಯಿಂದ 81.58 ಲಕ್ಷ ಜನ ಸಂತ್ರಸ್ತರಾಗಿದ್ದು ಇದುವರೆಗೆ 1,25,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 199 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು ಇದರಲ್ಲಿ 1,16,653 ಜನರಿಗೆ ನೆಲೆ ಕಲ್ಪಿಸಲಾಗಿದೆ. ಗುರುವಾರದಿಂದ ಶುಕ್ರವಾರದವರೆಗಿನ 24 ಗಂಟೆ ಅವಧಿಯಲ್ಲಿ ಮುಝಫ್ಫರ್‌ಪುರ ದಲ್ಲೇ 51.6 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಹರಿಯುವ ಗಂಡಕ್ ನದಿ ನೀರಿನ ಮಟ್ಟ ರೇವಘಾಟ್‌ನಲ್ಲಿ ಅಪಾಯಮಟ್ಟಕ್ಕಿಂತ 1.41 ಮೀಟರ್ ಕೆಳಮಟ್ಟದಲ್ಲಿದೆ. ಗಂಡಕ್ ನದಿ ದಡೌಲಿ ಘಾಟ್ ನ ಮರೌಲ್ ಮತ್ತು ಬೊರಾಬರಿ ವಿಭಾಗದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಕೇಂದ್ರ ಜಲ ಆಯೋಗದ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News