×
Ad

ಬಿಹಾರ: 3 ಮಾವೋವಾದಿಗಳ ಹತ್ಯೆ

Update: 2019-07-26 23:35 IST

ಪಾಟ್ನ, ಜು.26: ಭದ್ರತಾ ಪಡೆಗಳು ಔರಂಗಾಬಾದ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪಾಟ್ನಾದ 150 ಕಿ.ಮೀ. ದೂರವಿರುವ ಭೆಡಿಯಾ ಅರಣ್ಯ ಪ್ರದೇಶದಲ್ಲಿ ಕಮಾಂಡೊ ಬಟಾಲಿಯನ್ ಫಾರ್ ರಿಸೊಲೂಟ್ ಆ್ಯಕ್ಷನ್ (ಕೋಬ್ರಾ)ದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕೋಬ್ರಾ, ಸಿಆರ್‌ಪಿಎಫ್, ಎಸ್‌ಟಿಎಫ್ ಮತ್ತು ಪೊಲೀಸ್ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಅರಣ್ಯದಲ್ಲಿ ಸುಮಾರು 15 ಮಾವೋವಾದಿಗಳು ಅವಿತು ಕುಳಿತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ. ಭದ್ರತಾ ಪಡೆಗಳತ್ತ ಮೊದಲು ಗುಂಡಿನ ದಾಳಿ ನಡೆಸಿದ ಮಾವೋವಾದಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಬಳಿಕ ಮಾವೋವಾದಿಗಳು ಅಲ್ಲಿಂದ ಪರಾರಿಯಾಗಿದ್ದು ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಸಮವಸ್ತ್ರ ಧರಿಸಿದ ಮೂವರು ಮಾವೋವಾದಿಗಳ ಮೃತದೇಹ ಪತ್ತೆಯಾಗಿದೆ. ಜೊತೆಗೆ ಎಕೆ-47 ಮತ್ತು ಇನ್‌ಸಾಸ್ ರೈಫಲ್, ಒಂದು .303 ಪೊಲೀಸ್ ರೈಫಲ್, ಒಂದು ಕಾರ್ಬೈನ್, ಮಾವೋವಾದಿಗಳ ಸಾಹಿತ್ಯವಿರುವ ಪುಸ್ತಕಗಳು, ಕೆಲವು ಸುಧಾರಿತ ಸ್ಫೋಟಕ ಸಾಧನಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಹಲವು ಮಾವೋವಾದಿಗಳು ಗಾಯಗೊಂಡಿರುವ ಶಂಕೆಯಿದೆ. ಮಾವೋವಾದಿಗಳು ಈ ಭಾಗದಲ್ಲಿ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಐಜಿ ಎಸ್‌ಎಂ ಖೋಪ್ಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News