ಕಾನೂನುಬಾಹಿರ ವೈಮಾನಿಕ ಒಪ್ಪಂದ: ಸಿಬಿಐಯಿಂದ ದೀಪಕ್ ತಲ್ವಾರ್ ಬಂಧನ
ಹೊಸದಿಲ್ಲಿ, ಜು. 26: ಕಾನೂನು ಬಾಹಿರ ವೈಮಾನಿಕ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾರ್ಪೋರೇಟ್ ವಶೀಲಿಗಾರ ದೀಪಕ್ ತಲ್ವಾರ್‌ನನ್ನು ಸಿಬಿಐ ಶುಕ್ರವಾರ ಬಂಧಿಸಿದೆ. ದಿಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ತಲ್ವಾರ್‌ನನ್ನು ಸಿಬಿಐ ಬಂಧಿಸಿತು. ತಲ್ವಾರ್ ತನ್ನ ವಕೀಲ ತನ್ವೀರ್ ಅಹ್ಮದ್ ಮಿರ್ ಅವರ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಅನಿಲ್ ಕುಮಾರ್ ಸಿಸೋಡಿಯಾ ತಳ್ಳಿ ಹಾಕಿದ್ದರು. ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣದಲ್ಲಿ ಬಂಧಿತನಾಗಿರುವ ತಲ್ವಾರ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪ್ರಸ್ತುತ ತಲ್ವಾರ್ ತಿಹಾರ್ ಜೈಲಿನಲ್ಲಿದ್ದಾನೆ. ವಿಚಾರಣೆ ವೇಳೆ ಸಿಬಿಐ, ಹಲವು ಸಂಪುಟಗಳ ದಾಖಲೆಗಳೊಂದಿಗೆ ತಲ್ವಾರ್ ವಿರುದ್ಧ ವಾದ ಮಂಡಿಸಲು ಬಯಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.
ತಲ್ವಾರ್‌ಗೆ ಸಕ್ಕರೆ ಕಾಯಿಲೆ ಇದೆ. ಅಲ್ಲದೆ, ಬೈಪಾಸ್ ಸರ್ಜರಿ ಆಗಿದೆ. ಅವರಿಗೆ ವಕೀಲರನ್ನು ಹಾಗೂ ಕುಟುಂಬದವರನ್ನು ನೋಡಲು ಅವಕಾಶ ಮಾಡಿಕೊಡಬೇಕು ಎಂದು ಮಿರ್ ನ್ಯಾಯಾಲಯದ ಮುಂದೆ ಮನವಿ ಮಾಡಿದ್ದರು. ತಲ್ವಾರ್ ವಿದೇಶಿ ಖಾಸಗಿ ವಾಯು ಯಾನ ಸಂಸ್ಥೆಗೆ ಅನುಕೂಲವಾಗುವಂತೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರಿಂದ ಏರ್ ಇಂಡಿಯಾಕ್ಕೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿತ್ತು.