ಮೆದುಳಿನ ಸಮಸ್ಯೆಯಿಂದ ಮೃತಪಟ್ಟ ಕೇರಳದ ಜನಪ್ರಿಯ ಟಿಕ್ ಟಾಕ್ ಪುಟಾಣಿ ಸ್ಟಾರ್ ಆರುಣಿ
Update: 2019-07-27 15:52 IST
ನವದೆಹಲಿ: ಕೇರಳದ ಜನಪ್ರಿಯ ಟಿಕ್ ಟಾಕ್ ಸ್ಟಾರ್, ಬಾಲ ನಟಿ ಆರುಣಿ ಎಸ್ ಕುರುಪ್ ಮೆದುಳಿನ ಸಮಸ್ಯೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆಕೆಗೆ ಒಂಬತ್ತು ವರ್ಷ ವಯಸ್ಸಾಗಿತ್ತು.
ಆಕೆಯ ಆರೋಗ್ಯ ಸಮಸ್ಯೆಯ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ಕಳೆದ ಕೆಲ ದಿನಗಳಿಂದ ಜ್ವರ ಹಾಗೂ ತಲೆನೋವಿನ ಸಮಸ್ಯೆಗೊಳಗಾಗಿದ್ದ ಆಕೆಯನ್ನು ಮೊದಲು ಬೇರೊಂದು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ನಂತರ ತಿರುವನಂತಪುರಂನ ಎಸ್‍ಐಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಸ್ಥಿತಿ ವಿಷಮಿಸಿ ಆಕೆ ಮೃತಪಟ್ಟಿದ್ದಾಳೆ.
ಯೂಟ್ಯೂಬ್ ತುಂಬಾ ಆರುಣಿಯ ಟಿಕ್ ಟಾಕ್ ವೀಡಿಯೋಗಳೇ ತುಂಬಿವೆ. ಆಕೆಗೆ ಬಹಳಷ್ಟು ಅಭಿಮಾನಿಗಳಿದ್ದು ಆಕೆಯ ಸಾವು ಎಲ್ಲರಿಗೂ ಆಘಾತ ತಂದಿದೆ. ಆಕೆ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಕಳೆದ ವರ್ಷವಷ್ಟೇ ಆಕೆಯ ತಂದೆ ಸೌದಿ ಅರೇಬಿಯಾದಲ್ಲಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದರು.