×
Ad

ಮುಂಬೈ: ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ಪೂರ್ಣ

Update: 2019-07-27 16:53 IST

ಮುಂಬೈ, ಜು.27: ಮುಂಬೈ ಮಹಾನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮುಂಬೈ-ಕೊಲ್ಹಾಪುರ ಮಧ್ಯೆ ಸಂಚರಿಸುವ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್  ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 700 ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ.

19 ಕೋಚ್‌ಗಳ ವಿಶೇಷ ರೈಲಿನ ಮೂಲಕ ಕಲ್ಯಾಣ್ ಉಪನಗರದಿಂದ ಕೊಲ್ಹಾಪುರಕ್ಕೆ ಕರೆ ತರಲಾಗಿದೆ ಎಂದು ಮಧ್ಯ ರೈಲ್ವೇ ಮೂಲಗಳು ತಿಳಿಸಿವೆ.

ಭಾರೀ ಮಳೆ ಹಾಗೂ ತಗ್ಗು ಪ್ರದೇಶಗಳು ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಮಧ್ಯ ರೈಲ್ವೇಯ ಮುಂಬೈ ವಿಭಾಗದಲ್ಲಿ 3 ರೈಲುಗಳ ಸಂಚಾರವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. 2 ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಹಾಗೂ 9 ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಮಧ್ಯ ರೈಲ್ವೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಬದ್ಲಾಪುರ ಹಾಗೂ ವಾಂಗಾನಿ ಮಧ್ಯೆ ನೀರಿನಿಂದ ಜಲಾವೃತವಾಗಿರುವ ರೈಲು ಹಳಿಯ ಮಧ್ಯೆ ಮಹಾಲಕ್ಷ್ಮೀ ಎಕ್ಸ್‌ಪ್ರೆಸ್ ರೈಲು ಸಿಲುಕಿಹಾಕಿಕೊಂಡಿತ್ತು. ಜಲ ದಿಗ್ಬಂಧನಕ್ಕೆ ಒಳಗಾಗಿದ್ದ ಪ್ರಯಾಣಿಕರನ್ನು ರಕ್ಷಿಸಿದ ಎನ್‌ಡಿಆರ್‌ಎಫ್ ತಂಡ, ಭಾರತೀಯ ಸೇನೆ ಹಾಗೂ ಭಾರತೀಯ ವಾಯು ಸೇನಾ ಪಡೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News