×
Ad

ಜಮ್ಮುಕಾಶ್ಮೀರದಲ್ಲಿ ಅರೆ ಸೇನಾ ಪಡೆಯ 100 ಹೆಚ್ಚುವರಿ ತುಕಡಿ ನಿಯೋಜನೆಗೆ ಕೇಂದ್ರ ಆದೇಶ

Update: 2019-07-27 19:29 IST

ಜಮ್ಮುಕಾಶ್ಮೀರ, ಜು. 27: ಜಮ್ಮು ಹಾಗೂ ಕಾಶ್ಮೀರದಲ್ಲಿ ಕೇಂದ್ರ ಶಸಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯ 100 ತುಕಡಿಗಳನ್ನು ನಿಯೋಜಿಸಲು ಕೇಂದ್ರದ ಗೃಹ ಸಚಿವಾಲಯ ನಿರ್ಧರಿಸಿದೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯ 50 ತುಕಡಿಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ 10 ತುಕಡಿಗಳು, ಶಸಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ 30 ತುಕಡಿಗಳು ಹಾಗೂ ಇಂಡೋ-ಟಿಬೇಟನ್ ಗಡಿ ಪೊಲೀಸ್ (ಐಟಿಬಿಪಿ)ನ 10 ತುಕಡಿಗಳನ್ನು ನಿಯೋಜಿಸುವಂತೆ ಜಮ್ಮು ಹಾಗೂ ಕಾಶ್ಮೀರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಡಿಜಿಪಿಗೆ ರವಾನಿಸಿದ ಪತ್ರದಲ್ಲಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ.

 ಕೇಂದ್ರ ಸಚಿವಾಲಯದ ಜಮ್ಮು ಹಾಗೂ ಕಾಶ್ಮೀರ ವಿಭಾಗದ ಮುಖೇಶ್ ಅವರು ರವಾನಿಸಿದ ಪತ್ರದಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹಿಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಪ್ರಯತ್ನವಾಗಿ ಸಿಎಪಿಎಫ್‌ನ ಹೆಚ್ಚುವರಿ 100 ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಕಾಶ್ಮೀರದಲ್ಲಿ ಮನೆ ಮಾಡಿದ ಆತಂಕ

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಗೃಹ ಸಚಿವಾಲಯದ ಪತ್ರದ ಬಗ್ಗೆ ರಾಜಕಾರಣಿ ಶಾಹ್ ಪೈಸಲ್ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ. ‘‘ಸಿಎಪಿಎಫ್‌ನ ಹೆಚ್ಚುವರಿ 100 ತುಕಡಿಗಳನ್ನು ನಿಯೋಜಿಸಿರುವುದಕ್ಕೆ ಸಂಬಂಧಿಸಿ ಗೃಹ ಸಚಿವಾಲಯದ ಪತ್ರ ಕಾಶ್ಮೀರದಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ. ಸೇನೆಯನ್ನು ಇದ್ದಕ್ಕಿದ್ದಂತೆ ನಿಯೋಜಿಸಲು ಕಾರಣ ಏನು ಎಂಬುದು ಯಾರಿಗೂ ತಿಳಿದಿಲ್ಲ. ಕೆಟ್ಟದು ಸಂಭವಿಸಲಿದೆ ಎಂಬ ವದಂತಿ ಕೇಳಿ ಬರುತ್ತಿದೆ. ಕಲಂ 35 ಎಯನ್ನು ರದ್ದುಗೊಳಿಸುವ ಸಾಧ್ಯತೆ ಇದೆಯೇ ?’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೇನೆ ನಿಯೋಜಿಸುವ ಮೂಲಕ ಜಮ್ಮು ಕಾಶ್ಮೀರದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ ಎಂದು ಪಿಡಿಪಿ ವರಿಷ್ಠೆ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

 10 ಸಾವಿರ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವ ಕೇಂದ್ರ ಸರಕಾರದ ನಿರ್ಧಾರ ಜಮ್ಮು ಹಾಗೂ ಕಾಶ್ಮೀರದ ಜನರಲ್ಲಿ ಭೀತಿ ಉಂಟು ಮಾಡಿದೆ. ಕಾಶ್ಮೀರದಲ್ಲಿ ಭದ್ರತಾ ಪಡೆಯ ಕೊರತೆ ಇಲ್ಲ. ಜಮ್ಮು ಹಾಗೂ ಕಾಶ್ಮೀರದ ರಾಜಕೀಯ ಸಮಸ್ಯೆಯನ್ನು ಸೇನೆಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಕೇಂದ್ರ ಸರಕಾರ ತನ್ನ ನೀತಿಯ ಬಗ್ಗೆ ಕೂಲಂಕಷ ಹಾಗೂ ಮರು ಚಿಂತಿಸಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವುದು ಸಾಮಾನ್ಯ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಪುಲ್ವಾಮಾದಲ್ಲಿ ಉಗ್ರರಿಂದ ನಡೆದ ಆತ್ಮಾಹುತಿ ದಾಳಿಯಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಯೋಧರು ಹುತಾತ್ಮರಾದ ಬಳಿಕ ಈ ವರ್ಷ ಫೆಬ್ರವರಿಯಲ್ಲಿ ಕೂಡ ಹೆಚ್ಚುವರಿ 100 ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ರಾಕೇಶ್ ಕುಮಾರ್, ಐಜಿ ಸಿಆರ್‌ಪಿಎಫ್ ಕಾಶ್ಮೀರ ವಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News