ದ್ವೇಷ ಸಾರುವ ಹಾಡನ್ನು ಹಾಡಿದ ಆರೋಪದಲ್ಲಿ ನಾಲ್ವರ ಬಂಧನ
ಹೊಸದಿಲ್ಲಿ, ಜು.27: ದ್ವೇಷ ಸಾರುವ ಹಾಡನ್ನು ರಚಿಸಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಜೊ ನ ಬೋಲೆ ಜೈಶ್ರೀರಾಮ್, ಬೇಜ್ ದೊ ಉಸ್ಕೊ ಖಬ್ರಿಸ್ತಾನ್ (ಜೈಶ್ರೀರಾಮ ಎಂದು ಹೇಳದವರನ್ನು ಸ್ಮಶಾನಕ್ಕೆ ಕಳುಹಿಸಿ) ಎಂಬ ಹಾಡನ್ನು ಕಳೆದ ವಾರ ಸಾಮಾಜಿಕ ಮಾಧ್ಯಮದಲ್ಲಿ ಹಾಕಲಾಗಿದ್ದು ವೈರಲ್ ಆಗಿತ್ತು.
ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಹಿಂದಿ ಮತ್ತು ಬೋಜ್‌ಪುರಿ ಗಾಯಕ ವರುಣ್ ಬಹರ್, ಸಾಹಿತಿ ಮುಕೇಶ್ ಪಾಂಡೆ ಮತ್ತು ಸಂತೋಶ್ ಯಾದವ್ ಹಾಗೂ ಜಂತಾ ಮ್ಯೂಸಿಕಲ್ ಆ್ಯಂಡ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ ಮಾಲಕ ರಾಜೇಶ್ ಕುಮಾರ್ ವರ್ಮಾನನ್ನು ಬಂಧಿಸಿದ್ದಾರೆ. ಈ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ 153ಎ ವಿಧಿ (ಭಿನ್ನ ಗುಂಪುಗಳ ಮಧ್ಯೆ ಧಾರ್ಮಿಕ, ಜನಾಂಗೀಯ, ಭಾಷೆ ಇತ್ಯಾದಿ ಹಿನ್ನೆಲೆಯಲ್ಲಿ ಶತ್ರುತ್ವಕ್ಕೆ ಪ್ರಚೋದನೆ) ಮತ್ತು 298ನೇ ವಿಧಿ (ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ) ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಆಂಗ್ಲ ಪತ್ರಿಕೆಗೆ ಹೇಳಿಕೆ ನೀಡಿರುವ ಗಾಯಕ ಬಹರ್, ನಾನು ಜೈಶ್ರೀರಾಮನ ಭಕ್ತನಾಗಿದ್ದೇನೆ. ಇದು ಎಲ್ಲವೂ ಹಿಂದುತ್ವ ಮತ್ತು ಕೇವಲ ಹಿಂದುತ್ವಕ್ಕಾಗಿ ಮಾತ್ರ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಯೂಟ್ಯೂಬ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಬಹರ್, ನಾನು ಈ ಹಾಡನ್ನು ಹಿಂದುತ್ವದ ಮೇಲಿನ ಪ್ರೀತಿಯಿಂದ ಹಾಡಿದ್ದೇನೆ ಮತ್ತು ಈ ಹಾಡಿನಲ್ಲಿ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮಾಜದ ವಿಭಾಗವನ್ನು ಉಲ್ಲೇಖಿಸದಿರುವ ಕಾರಣ ಈ ಹಾಡಿನಲ್ಲಿ ವ್ಯಕ್ತಪಡಿಸಲಾಗಿರುವ ಭಾವನೆಗಳು ತಪ್ಪಾಗಿವೆ ಎಂದು ನನಗೆ ಅನಿಸುವುದಿಲ್ಲ ಎಂದು ತಿಳಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಮಾಲಕ ರಾಜೇಶ್ ಕುಮಾರ್ ವರ್ಮಾ ನೀಡಿರುವ ಹೇಳಿಕೆಯಲ್ಲಿ, ಈ ಹಾಡನ್ನು ಈಗಾಗಲೇ ಯೂಟ್ಯೂಬ್ ಚಾನೆಲ್‌ನಿಂದ ಅಳಿಸಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಹಾಡುಗಳನ್ನು ಹಾಕುವುದಿಲ್ಲ ಎಂದು ತಿಳಿಸಿದ್ದಾರೆ.