ರಾಷ್ಟ್ರಮಟ್ಟದ ಶೂಟರ್‌ನ್ನು ವಂಚಿಸಿ ಮದುವೆಯಾಗಿದ್ದ ವ್ಯಕ್ತಿಯ ವಿರುದ್ಧ ಆರೋಪ ರೂಪಿಸಿದ ನ್ಯಾಯಾಲಯ

Update: 2019-07-27 14:23 GMT

ರಾಂಚಿ(ಜಾರ್ಖಂಡ್),ಜು.27: ರಾಷ್ಟ್ರಮಟ್ಟದ ಏರ್ ರೈಫಲ್ ಶೂಟರ್ ತಾರಾ ಸಹದೇವ್ ಅವರನ್ನು ಮದುವೆಯಾಗುವಾಗ ತನ್ನ ಧರ್ಮದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ರಕೀಬುಲ್ ಹಸನ್ ಅಲಿಯಾಸ್ ರಂಜಿತ್ ಕೊಹ್ಲಿ ಮತ್ತು ಆತನಿಗೆ ನೆರವಾಗಿದ್ದ ಇತರ ನಾಲ್ವರ ವಿರುದ್ಧ ಇಲ್ಲಿಯ ಸಿಬಿಐ ನ್ಯಾಯಾಲಯವು ಆರೋಪಗಳನ್ನು ರೂಪಿಸಿದೆ. ಈ ಮದುವೆ ಬಳಿಕ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು.

ಹಸನ್‌ನ ತಾಯಿ ಕೌಶಲ ರಾಣಿ,ಮಾಜಿ ನ್ಯಾಯಾಧೀಶ ಪಂಕಜ್ ಶ್ರೀವಾಸ್ತವ ಮತ್ತು ಆಗಿನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಗಯಾ ರಾಜೇಶ ಪ್ರಸಾದ್ ಮತ್ತು ಅಜಯ್ ಕುಮಾರ್ ಅವರು ಇತರ ನಾಲ್ವರುಆರೋಪಿಗಳಾಗಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ಹಸನ್‌ಗೆ ಆಶ್ರಯ ನೀಡಿದ್ದ ಆರೋಪಗಳನ್ನು ಹೊರಿಸಲಾಗಿದ್ದು,ಅವರು ಆರೋಪಗಳನ್ನು ನಿರಾಕರಿಸಿದ್ದಾರೆ.

ನ್ಯಾಯಾಲಯವು ಆ.23ರಿಂದ ಪ್ರಕರಣದಲ್ಲಿಯ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದೆ.

ಸಹದೇವ್ 2014ರಲ್ಲಿ ರಾಂಚಿಯ ಹಿಂದ್‌ಪಿರಿ ಪೊಲೀಸ್‌ಠಾಣೆಯಲ್ಲಿ ಹಸನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, 2015ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.

 ಹಸನ್ ಮದುವೆಗೆ ಮುನ್ನ ತನ್ನ ಧರ್ಮದ ಕುರಿತು ಸುಳ್ಳು ಮಾಹಿತಿಯನ್ನು ನೀಡಿದ್ದು ಹಾಗೂ ಮದುವೆಯ ಬಳಿಕ ಕೌಟುಂಬಿಕ ಮತ್ತು ದೈಹಿಕ ಹಿಂಸೆಗಳ ಕಾರಣವನ್ನು ಮುಂದಿಟ್ಟುಕೊಂಡು ಸಹದೇವ್ ಅವರು 2017,ಜ.6ರಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು,ಕುಟುಂಬ ನ್ಯಾಯಾಲಯವು 2018,ಜೂ.27ರಂದು ವಿಚ್ಛೇದನದ ಆದೇಶವನ್ನು ಹೊರಡಿಸಿತ್ತು.

ತನ್ನ ಧರ್ಮವನ್ನು ಬದಲಿಸುವಂತೆಯೂ ಹಸನ್ ತನ್ನ ಮೇಲೆ ಒತ್ತಡ ಹೇರಿದ್ದ ಎಂದೂ ಸಹದೇವ್ ಆರೋಪಿಸಿದ್ದರು.

ಈ ಪ್ರಕರಣ ಐದು ವರ್ಷಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವಾಲಯವು ಆಗ ಈ ಬಗ್ಗೆ ವರದಿಯನ್ನು ಕೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News