ಮಧ್ಯಪ್ರದೇಶ:ಇ-ಟೆಂಡರಿಂಗ್ ಪ್ರಕರಣದಲ್ಲಿ ಮಾಜಿ ಸಚಿವರ ಸಹಾಯಕರ ಬಂಧನ

Update: 2019-07-27 14:25 GMT

ಭೋಪಾಲ, ಜು.27: ಹಿರಿಯ ಬಿಜೆಪಿ ನಾಯಕ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಸರಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ನರೋತ್ತಮ ಮಿಶ್ರಾ ಅವರ ಇಬ್ಬರು ಮಾಜಿ ಕಾರ್ಯದರ್ಶಿಗಳಾದ ವೀರೇಂದ್ರ ಪಾಂಡೆ ಮತ್ತು ನಿರ್ಮಲ್ ಅವಸ್ಥಿ ಅವರನ್ನು 80,000 ಕೋ.ರೂ.ಗಳ ಇ-ಟೆಂಡರಿಂಗ್ ಹಗರಣದಲ್ಲಿ ರಾಜ್ಯ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಬಂಧಿಸಿದೆ.

ಮಿಶ್ರಾ ಅವರಿಗೆ ನೇರವಾಗಿ ಸಂಬಂಧಿಸಿರುವ ಈ ಪ್ರಕರಣದಲ್ಲಿ ಇವು ಮೊದಲ ಬಂಧನಗಳಾಗಿವೆ.

ಶುಕ್ರವಾರ ಬಂಧನದ ಬಳಿಕ ನ್ಯಾಯಾಲಯವು ಇಬ್ಬರಿಗೂ ಪೊಲೀಸ್ ಕಸ್ಟಡಿಯನ್ನು ವಿಧಿಸಿದ್ದು, ತಡರಾತ್ರಿ ಎದೆನೋವೆಂದು ದೂರಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಕೀಲರ ರಕ್ಷಣಾ ಕಾಯ್ದೆ ಮಸೂದೆಯ ಮೇಲೆ ರಾಜ್ಯ ವಿಧಾನಸಭೆಯಲ್ಲಿ ಅಡ್ಡ ಮತದಾನ ನಡೆದ ಎರಡು ದಿನಗಳ ಬಳಿಕ ಈ ಬಂಧನಗಳಾಗಿವೆ. ಬುಧವಾರ ಮಸೂದೆಯ ಮೇಲಿನ ಮತದಾನದ ವೇಳೆ ಹಾಲಿ ಬಿಜೆಪಿ ಶಾಸಕರಾಗಿರುವ ಮಾಜಿ ಕಾಂಗ್ರೆಸಿಗರಾದ ಶರದ್ ಕೋಲ್ ಮತ್ತು ನಾರಾಯಣ ತ್ರಿಪಾಠಿ ಅವರು ಕಾಂಗ್ರೆಸ್ ಸರಕಾರವು ಮಂಡಿಸಿದ್ದ ಮಸೂದೆಯ ಪರವಾಗಿ ಮತಗಳನ್ನು ಚಲಾಯಿಸಿದ್ದರು. ಮಧ್ಯಪ್ರದೇಶದ ವಕೀಲರ ದೀರ್ಘಕಾಲದ ಬೇಡಿಕೆಯಾಗಿದ್ದ ಈ ಮಸೂದೆಯು 15 ವರ್ಷಗಳ ಹಿಂದೆಯೇ ಸಿದ್ಧಗೊಳಿಸಲಾಗಿತ್ತಾದರೂ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರದ ಮೂರು ಅಧಿಕಾರಾವಧಿಗಳಲ್ಲಿಯೂ ಸದನದಲ್ಲಿ ಮಂಡನೆಯಾಗಿರಲಿಲ್ಲ.

ಬಿಜೆಪಿಗೆ ತೀವ್ರ ಆಘಾತವನ್ನುಂಟು ಮಾಡಿದ್ದ ಅಡ್ಡ ಮತದಾನದ ಬಳಿಕ ಮಿಶ್ರಾ ಅವರು,ಕಾಂಗ್ರೆಸ್ ಆಟವನ್ನಾರಂಭಿಸಿದೆ,ಆದರೆ ಬಿಜೆಪಿ ಅದನ್ನು ಮುಗಿಸಲಿದೆ ಎಂದು ಹೇಳಿದ್ದರು. ಮಿಶ್ರಾ ಅವರು ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಶಾಸಕರಿಗೆ ಆಮಿಷಗಳನ್ನೊಡ್ಡುವ ಮೂಲಕ ಕಮಲನಾಥ್ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಿಂದೆ ಆರೋಪಿಸಿತ್ತು.

ಇ-ಟೆಂಡರಿಂಗ್ ಪ್ರಕರಣವು 2018ರಲ್ಲಿ ಜಲ ಸಂಪನ್ಮೂಲ ಇಲಾಖೆಯು ಕರೆದಿದ್ದ ಇ-ಟೆಂಡರ್‌ನಲ್ಲಿ ಹಸ್ತಕ್ಷೇಪಕ್ಕೆ ಸಂಬಂಧಿಸಿದೆ. ಯೋಜನೆಯೊಂದಕ್ಕಾಗಿ ಇಲಾಖೆಯು 116 ಕೋ.ರೂ.ಗಳ ಇ-ಟೆಂಡರ್‌ವೊಂದನ್ನು ಕರೆದಿದ್ದು, ಇದನ್ನು ಗುಜರಾತಿನ ಕಂಪನಿಯೊಂದು 113 ಕೋ.ರೂ.ಗಳಿಗೆ ಪಡೆದುಕೊಂಡಿತ್ತು. ಸ್ವೀಕೃತಿ ಪತ್ರವನ್ನು ನೀಡುವಾಗ ಮೊತ್ತವನ್ನು 105 ಕೋ.ರೂ.ಗೆ ಇಳಿಸಲಾಗಿತ್ತು ಎಂದು ಆರ್ಥಿಕ ಅಪರಾಧ ಘಟಕದಲ್ಲಿನ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News