ವೈಜ್ಞಾನಿಕ ರೀತಿಯ ಕೃಷಿಯಿಂದ ಮಾತ್ರ ರೈತನ ಅಭಿವೃದ್ಧಿ ಸಾಧ್ಯ: ಶರ್ಮ

Update: 2019-07-27 14:57 GMT

ಉಡುಪಿ, ಜು.27: ನೂರಕ್ಕೆ ನೂರು ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರೆ ಮಾತ್ರ ರೈತನ ಅಭಿವೃದ್ಧಿ ಸಾಧ್ಯವಾಗುತ್ತದೆ. ಆಗ ಮಾತ್ರ ಕೃಷಿ ಲಾಭದಾಯಕ ವಾಗಿರುತ್ತದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘ ನಗರದ ಹೊಟೇಲ್ ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೃಷಿಕರಿಗೆ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಕೃಷಿ ಸಂಘಟನೆಯ ಕುರಿತು ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ಜಿಲ್ಲೆಯ ರೈತರು ಸಂಪದ್ಭರಿತರಾಗಬೇಕೆಂಬ ಕನಸಿನೊಂದಿಗೆ 22 ವರ್ಷಗಳ ಹಿಂದೆ ಜಿಲ್ಲಾ ಕೃಷಿಕ ಸಂಘವನ್ನು ಪ್ರಾರಂಭಿಸಲಾಗಿತ್ತು. ಆದರೆ ಇಂದು ರೈತರ ಪರಿಸ್ಥಿತಿಯನ್ನು ನೋಡಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ವೈಜ್ಞಾನಿಕ ಕೃಷಿ, ಬಲಿಷ್ಠ ಸಂಘಟನೆ ಹಾಗೂ ಹೋರಾಟದ ಮೂಲಕ ಈಗಲೂ ರೈತ ಸ್ವಾವಲಂಬಿ ಹಾಗೂ ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಸಾಧ್ಯವಿದೆ ಎಂಬುದನ್ನು ಅನುಭವದಿಂದ ತಾನು ಕಂಡುಕೊಂಡಿದ್ದೇನೆ ಎಂದವರು ನುಡಿದರು.

ಈ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡಲೇಬೇಕು. ಇದಕ್ಕಾಗಿ ರೈತ ತನ್ನ ಮನಸ್ಥಿತಿಯಲ್ಲಿ ಸಮಗ್ರ ಬದಲಾವಣೆ ಮಾಡಿಕೊಳ್ಳಬೇಕು. ವೈಜ್ಞಾನಿಕ ಕೃಷಿ, ಸಂಘಟನೆ, ಹೋರಾಟ ಆತನ ಬೀಜಮಂತ್ರಗಳಾಗಬೇಕು. ರೈತರು ಸಂಘಟಿತ ರಾಗಿ ಒಗ್ಗಟ್ಟಿನಿಂದ ಹೋರಾಟಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಗತಿಪರ ಕೃಷಿಕ ಪ್ರಶಸ್ತಿ ವಿಜೇತ ಶ್ರೀನಿವಾಸ ಭಟ್ ಕುದಿ ಅವರು ಸಮಗ್ರ ಕೃಷಿ ಮಾಹಿತಿ ಯನ್ನು ನೀಡಿ, ಜಿಲ್ಲೆಯ ಪ್ರತಿಯೊಬ್ಬ ಕೃಷಿಕರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಮ್ಮ ಹೆಸರನ್ನು ನೊಂದಾಯಿಸಿ ಕೊಳ್ಳುವಂತೆ ಸಲಹೆ ನೀಡಿದರು. ಹೆಸರು ನೊಂದಾಯಿಸಿಕೊಂಡ ಮೂರು ತಿಂಗಳಿಗೆ ನಿಮಗೆ ಕೇಂದ್ರ ಸರಕಾರದ 6,000ರೂ.ಗಳಲ್ಲಿ ಮೊದಲ ಕಂತು ಬಾರದೇ ಇದ್ದರೆ, ಮತ್ತೆ ನೊಂದಾಯಿಸಿಕೊಳ್ಳಬೇಕು. ಇದರಿಂದ ವಾರ್ಷಿಕ ನಿಮಗೆ 10,000ರೂ. ಸಿಗುವುದು ಖಂಡಿತ. ಇದಕ್ಕೆ ಬೇಕಾದ ಸಹಾಯವನ್ನು ಸಂಘ ಮಾಡಲಿದೆ ಎಂದರು.

ರೈತರಿಗಾಗಿ ತೋಟಗಾರಿಕಾ ಇಲಾಖೆಯ ಸಾಕಷ್ಟು ಯೋಜನೆಗಳಿದ್ದು, ಅವುಗಳ ಬಗ್ಗೆ ಮಾಹಿತಿ ಪಡೆಯಿರಿ. ಜಮೀನನ್ನು ಹಡೀಲು ಬಿಡಬೇಡಿ. ಆದಷ್ಟು ಬೇಗ ಏನಾದರೂ ಅಲ್ಲಿ ಬೆಳೆಯಿರಿ. ಅನಗತ್ಯವಾಗಿ ಹೊರಗೆ ಸಾಲ ಮಾಡಬೇಡಿ, ಸಹಕಾರಿ ಸಂಘಗಳು ಈಗಲೂ ಬಡ್ಡಿರಹಿತ ಸಾಲ ನೀಡುತ್ತೀವೆ. ಇವುಗಳನ್ನು ಬೇಕಿದ್ದರೆ ಬಳಸಿಕೊಳ್ಳಿ ಎಂದವರು ಸಲಹೆ ನೀಡಿದರು.

ಈಗ ಕೆಲವು ದಿನಗಳಿಂದ ಭಾರೀ ಮಳೆಯಾಗುತಿದ್ದರೂ, ಒಟ್ಟಾರೆಯಾಗಿ ಈ ಬಾರಿ ಕಡಿಮೆ ಮಳೆ ಬಿದ್ದಿದೆ. ಹೀಗಾಗಿ ಸಾಧ್ಯವಿದ್ದಷ್ಟು ಸುಲಭ ಬೆಳೆಗಳತ್ತ ಗಮನ ಹರಿಸಿ, ಅವುಗಳನ್ನು ಸಹಜ ರೀತಿಯಲ್ಲಿ ಮಾಡಿ. ಬೆಳೆಗಳಿಗೆ ಇನ್ನು ಕೀಟ ಬಾಧೆ ಶುರುವಾಗಲಿದ್ದು, ಇಲಾಖೆಯಲ್ಲಿರುವ ಉಚಿತ ಪರಿಹಾರಗಳನ್ನು ಬಳಸಿಕೊಳ್ಳಿ. ಯಂತ್ರೋಪರಣಗಳನ್ನು ಬಳಸಿ, ಅವುಗಳ ನಿರ್ವಹಣೆ ಬಗ್ಗೆಯೂ ನಿಗಾ ವಹಿಸಿ ಎಂದರು.

ಈ ಬಾರಿ ರೈತರು ನೀರಿನ ಕೊರತೆಯಿಂದ ಅತೀ ಹೆಚ್ಚು ತೊಂದರೆಗೊಳ ಗಾಗಿದ್ದಾರೆ. ಹೀಗಾಗಿ ನೀರಿನ ಸಂರಕ್ಷಣೆಗೆ ರೈತರು ಹೆಚ್ಚು ಗಮನ ಹರಿಸಬೇಕು. ಇಲಾಖೆಯ ಸಹಾಯಧನದಿಂದ ಕೃಷಿಹೊಂಡ, ಬಾವಿ ಹಾಗೂ ಕೊಳವೆ ಬಾವಿಗಳಿಗೆ ನೀರಿನ ಇಂಗಿಸುವಿಕೆಗೆ ಆದ್ಯತೆ ಇದೆ. ನೀರಿಗಿಂಸುವಿಕೆಯಿಂದ ಬಾವಿಯಲ್ಲಿ ಎಪ್ರಿಲ್-ಮೇ ತಿಂಗಳಲ್ಲೂ ಖಂಡಿತ ನೀರಿಗೆ ಕೊರತೆಯಾಗದು. ಜಾಸ್ತಿ ಜಮೀನಿದ್ದವರು ಮಾತ್ರ ಕೃಷಿಹೊಂಡ ರಚಿಸಿ ಎಂದರು.

ರೈತರಲ್ಲಿ ಜಲಜಾಗೃತಿ ಮೂಡುವವರೆಗೆ ಕೃಷಿ ಉದ್ಧಾರವಾಗುವುದಿಲ್ಲ ಎಂದ ಕುದಿ ಶ್ರೀನಿವಾಸ ಭಟ್, ಕಾಪಿಟ್ಟ ಕಾಳುಮೆಣಸು, ಅಡಿಕೆ, ತೆಂಗಿನಕಾಯಿಗಳನ್ನು ಮಾರುವ ಮುನ್ನ ಮಾರುಕಟ್ಟೆಯ ಮುನ್ಸೂಚನೆಯನ್ನು ಅರಿತುಕೊಳ್ಳಿ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ತೋಟಗಾರಿಕಾ ಅಧಿಕಾರಿ ದೀಪಾ ಮಾತನಾಡಿ, ರೈತರು ಮೊದಲು ಬೆಳೆ ವಿಮೆಯನ್ನು ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲದೇ ರೈತರಿಗೆ ಹಾಗೂ ಕೃಷಿಗೆ ಇಲಾಖೆಯಲ್ಲಿ ಲಭ್ಯವಿರುವ ಸಹಾಯಧನ, ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಹಿರಿಯ ಕೃಷಿಕ ಕೆ.ಮಂಜುನಾಥ ನಾಯಕ್ ಕರಂಬಳ್ಳಿ ಅವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಭಾಸ್ಕರ ಶೆಟ್ಟಿ ಉಚ್ಚಿಲ ಹಾಗೂ ದಿನೇಶ್ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.

ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News