ಪಾಕ್‌ಗೆ ಎಫ್-16 ವಿಮಾನಗಳ ಪೂರಕ ಭಾಗಗಳ ಮಾರಾಟಕ್ಕೆ ಅಮೆರಿಕ ನಿರ್ಧಾರ

Update: 2019-07-27 15:25 GMT

ವಾಶಿಂಗ್ಟನ್, ಜು. 27: ಪಾಕಿಸ್ತಾನಕ್ಕೆ 125 ಮಿಲಿಯ ಡಾಲರ್ (ಸುಮಾರು 628 ಕೋಟಿ ರೂಪಾಯಿ) ಮೌಲ್ಯದ ಸೇನಾ ಉಪಕರಣಗಳನ್ನು ಮಾರಾಟ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಲು ನಿರ್ಧರಿಸಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಸಂಸತ್ತು ಕಾಂಗ್ರೆಸ್‌ಗೆ ತಿಳಿಸಿದೆ.

ಈ ಯುದ್ಧ ಸಲಕರಣೆಗಳು ಪಾಕಿಸ್ತಾನ ಈಗಾಗಲೇ ಹೊಂದಿರುವ ಎಫ್-16 ಯುದ್ಧ ವಿಮಾನಗಳ ನಿರ್ವಹಣೆಗೆ ಅಗತ್ಯವಾದ ಬಿಡಿಭಾಗಗಳಾಗಿವೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಸಂದರ್ಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಆದರೆ, ಡೊನಾಲ್ಡ್ ಟ್ರಂಪ್‌ರ ಸೂಚನೆಯಂತೆ ಪಾಕಿಸ್ತಾನಕ್ಕೆ ನೀಡುವ ಸೇನಾ ನೆರವಿನ ಮೇಲೆ 2018 ಜನವರಿಯಿಂದ ವಿಧಿಸಲಾಗಿರುವ ನಿರ್ಬಂಧ ಈಗಲೂ ಮುಂದುವರಿದಿದೆ ಎಂದು ಅಮೆರಿಕದ ಅಧಿಕಾರಿಗಳು ಪ್ರತಿಪಾದಿಸುತ್ತಾರೆ. ಪಾಕಿಸ್ತಾನಕ್ಕೆ ಸೇನಾ ಬಿಡಿ ಭಾಗಗಳ ಮಾರಾಟ ಮಾಡುವ ನಿರ್ಧಾರದಿಂದಾಗಿ ಎಫ್-16 ಯುದ್ಧ ವಿಮಾನಗಳ ಚಲನವಲನಗಳ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ಕರಾರಿನಂತೆ, 60 ಗುತ್ತಿಗೆದಾರ ಪ್ರತಿನಿಧಿಗಳನ್ನು ಪಾಕಿಸ್ತಾನದ ಎಫ್-16 ಕಾರ್ಯಕ್ರಮದ ಉಸ್ತುವಾರಿ ನೋಡಲು ಆ ದೇಶಕ್ಕೆ ನಿಯೋಜಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

‘‘ಈ ಪ್ರಸ್ತಾಪಿತ ಮಾರಾಟವು ಅಮೆರಿಕದ ವಿದೇಶ ನೀತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಬೆಂಬಲಿಸುತ್ತದೆ. ಎಫ್-16 ವಿಮಾನಗಳ ಅಂತಿಮ ಬಳಕೆಯ ಮೇಲೆ ನಿಗಾ ಇಡುವುದಕ್ಕಾಗಿ ಆ ದೇಶದಲ್ಲಿ ನಮ್ಮ ಪ್ರತಿನಿಧಿಗಳಿರುತ್ತಾರೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News