ದಕ್ಷಿಣ ಏಶ್ಯದಲ್ಲಿ ಪ್ರವಾಹ: 600 ಸಾವು, 2.5 ಕೋಟಿಗೂ ಅಧಿಕ ಮಂದಿ ನಿರ್ವಸಿತ; ವಿಶ್ವಸಂಸ್ಥೆ

Update: 2019-07-27 15:35 GMT

ವಿಶ್ವಸಂಸ್ಥೆ, ಜು. 27: ಬಾಂಗ್ಲಾದೇಶ, ಭಾರತ, ನೇಪಾಳ ಮತ್ತು ಮ್ಯಾನ್ಮಾರ್‌ನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉದ್ಭವಿಸಿದ ಪ್ರವಾಹದಲ್ಲಿ ಕನಿಷ್ಠ 600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 2.5 ಕೋಟಿಗೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಪೈಕಿ 5 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ರ ಉಪ ವಕ್ತಾರ ಫರ್ಹಾನ್ ಹಕ್ ತಿಳಿಸಿದರು.

 ಭಾರತದಲ್ಲಿ ಗಂಭೀರ ಪ್ರವಾಹ ಸಮಸ್ಯೆಯಿರುವ ಮೂರು ರಾಜ್ಯಗಳಾದ ಅಸ್ಸಾಮ್, ಬಿಹಾರ ಮತ್ತು ಉತ್ತರ ಪ್ರದೇಶಗಳಲ್ಲಿ ಅಲ್ಲಿನ ರಾಜ್ಯ ಸರಕಾರಗಳೊಂದಿಗೆ ಯುನಿಸೆಫ್ ಕೆಲಸ ಮಾಡುತ್ತಿದೆ.

 ರಸ್ತೆಗಳು, ಸೇತುವೆಗಳು ಮತ್ತು ರೈಲು ಹಳಿಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರದೇಶಗಳ ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ, ಮಕ್ಕಳ ಅತ್ಯಂತ ತುರ್ತು ಅಗತ್ಯಗಳಾದ ಶುದ್ಧ ನೀರು, ರೋಗಗಳ ಹರಡುವಿಕೆಯನ್ನು ತಡೆಯಲು ಸ್ವಚ್ಛ ಪರಿಕರಗಳು, ಆಹಾರ ಹಾಗೂ ಪರಿಹಾರ ಶಿಬಿರಗಳಲ್ಲಿ ಆಟವಾಡಲು ಸುರಕ್ಷಿತ ಸ್ಥಳಗಳನ್ನು ಒದಗಿಸುವುದು ಅವಶ್ಯವಾಗಿದೆ ಎಂದು ಯುನಿಸೆಫ್ ತಿಳಿಸಿದೆ.

ಭಾರತದಲ್ಲಿ ಒಂದು ಕೋಟಿಗೂ ಅಧಿಕ ಸಂತ್ರಸ್ತರು

ಭಾರತದಲ್ಲಿ ಅಸ್ಸಾಮ್, ಬಿಹಾರ, ಉತ್ತರಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ತಲೆದೋರಿರುವ ಪ್ರವಾಹದಿಂದ ಒಂದು ಕೋಟಿಗೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಈ ಪೈಕಿ, 43 ಲಕ್ಷ ಮಕ್ಕಳು.

ಅಸ್ಸಾಮ್ ಒಂದರಲ್ಲೇ ಪ್ರವಾಹದ ನೀರಿನಿಂದಾಗಿ ಸುಮಾರು 2,000 ಶಾಲೆಗಳು ಹಾನಿಗೀಡಾಗಿವೆ. ಭಾರತದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಏರ್ಪಟ್ಟಿದ್ದರೆ, ಇತರ ಹಲವು ಭಾಗಗಳು ತೀವ್ರ ಉಷ್ಣತೆಯಿಂದ ಬಳಲುತ್ತಿವೆ ಹಾಗೂ ನೀರಿನ ಕೊರತೆಯನ್ನು ಎದುರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News