ಖುರೇಶಿ ಪ್ರಕರಣ: ಸನಾ ಸತೀಶ್ ಬಾಬು ಬಂಧನ

Update: 2019-07-27 16:40 GMT

ಹೊಸದಿಲ್ಲಿ, ಜು.27: ಮೊಯಿನ್ ಖುರೇಶಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೈದರಾಬಾದ್ ಮೂಲದ ಉದ್ಯಮಿ ಸನಾ ಸತೀಶ್ ಬಾಬುರನ್ನು ಬಂಧಿಸಿದ್ದಾರೆ.

 ತನಗೆ ಸರಕಾರಿ ಅಧಿಕಾರಿಗಳ ಪರಿಚಯವಿದ್ದು ಅವರಿಂದ ಸಹಾಯ ಮಾಡಿಸುವುದಾಗಿ ಹೇಳಿ ಖುರೇಶಿ ಹಲವರಿಂದ ಹಣ ವಸೂಲಿ ಮಾಡಿ ವಂಚಿಸಿದ್ದ ಎಂದು ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

  ಖುರೇಶಿಗೆ ಸಂಬಂಧಿಸಿದ ಸಂಸ್ಥೆಯಿಂದ ಸತೀಶ್ ಬಾಬು 50 ಲಕ್ಷ ರೂ. ಮೊತ್ತದ ಶೇರುಗಳನ್ನು ಖರೀದಿಸಿದ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸುತ್ತಿದ್ದಾರೆ. ಪ್ರಕರಣವೊಂದನ್ನು ಇತ್ಯರ್ಥಗೊಳಿಸಲು ಲಂಚದ ರೂಪದಲ್ಲಿ ಈ ಮೊತ್ತ ಪಾವತಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ.

 ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರಂಭದಲ್ಲಿ ಸಾಕ್ಷಿಯಾಗಿದ್ದ ಸತೀಶ್ ಬಾಬು ಬಳಿಕದ ಬೆಳವಣಿಗೆಯಲ್ಲಿ ಓರ್ವ ಆರೋಪಿಯೆಂದು ಹೆಸರಿಸಲ್ಪಟ್ಟಿದ್ದ. ಈತನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 26ರಂದು ಬಂಧಿಸಲಾಗಿದ್ದು ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

   ಖುರೇಶಿ ಮತ್ತು ಇತರರನ್ನು ಬಂಧಿಸುವಂತೆ ಈ ಹಿಂದಿನ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಶಿಫಾರಸು ಮಾಡಿದ್ದರು. ಆದರೆ ತನ್ನಿಂದ ಅಸ್ತಾನಾ ಲಂಚ ಪಡೆದಿದ್ದರು ಎಂದು ಸತೀಶ್ ಬಾಬು ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ಕುಮಾರ್ ವರ್ಮ ನೇತೃತ್ವದ ತಂಡ ಅಸ್ತಾನರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು.

ಇನ್ನೊಂದೆಡೆ, ಅಸ್ತಾನಾ ನೇತೃತ್ವದ ತಂಡ ಅಲೋಕ್ ಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News