×
Ad

ಶಿಕ್ಷಕಿಯ ಶಿಕ್ಷೆಗೆ ಆಸ್ಪತ್ರೆಗೆ ದಾಖಲಾದ ಶಾಲಾ ಮಕ್ಕಳು

Update: 2019-07-28 10:49 IST

ಭುವನೇಶ್ವರ, ಜು.28: ಒಡಿಶಾದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ನಬರಂಗ್‌ಪುರ್ ಜಿಲ್ಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಶಿಕ್ಷಕಿಯೊಬ್ಬರು ಸರಿಯಾಗಿ ಉಚ್ಚಾರಣೆ ಮಾಡಿಲ್ಲ ಹಾಗೂ ಪದವೊಂದಕ್ಕೆ ಸರಿಯಾದ ಅರ್ಥ ಹೇಳಿಲ್ಲ ಎಂಬ ಕಾರಣಕ್ಕೆ ಪ್ರಾಥಮಿಕ ಶಾಲೆಯ ಏಳು ಮಕ್ಕಳಿಗೆ ಚೆನ್ನಾಗಿ ಥಳಿಸಿ ಆಸ್ಪತ್ರೆಗೆ ಸೇರುವಂತೆ ಮಾಡಿದ್ದಾರೆ.

 ಭುವನೇಶ್ವರದಿಂದ 500 ಕಿ.ಮೀ. ದೂರದಲ್ಲಿರುವ ಉಮರ್‌ಕೋಟ್‌ನಲ್ಲಿರುವ ಸರಕಾರಿ ಶಾಲೆಯ ಮೂರನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಶಿಕ್ಷಕಿ ಜಯಂತಿಬಾಲಾ ಬಾತ್ರಾ ಪದದ ಅರ್ಥ ಕೇಳಿದ್ದಾರೆ. ಏಳು ಮಕ್ಕಳಿಗೆ ಸರಿಯಾಗಿ ಉಚ್ಚಾರಣೆ ಮಾಡಲು ಬರುತ್ತಿರಲಿಲ್ಲ. ಇದರಿಂದ ಕೋಪಗೊಂಡ ಶಿಕ್ಷಕಿ ಆರಂಭದಲ್ಲಿ ಕೈಯಲ್ಲಿ ಏಟು ಬಾರಿಸಿದ್ದಾರೆ. ಬಳಿಕ ಕೋಲಿನಿಂದ ಬೆನ್ನು ಹಾಗೂ ಕೈಗೆ ಚೆನ್ನಾಗಿ ಥಳಿಸಿದ್ದಾರೆ. ಪೆಟ್ಟು ತಿಂದಿರುವ ಮಕ್ಕಳು ಭಯದಿಂದ ಯಾರಿಗೂ ಘಟನೆಯ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಐವರು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಸ್ಥಳೀಯ ಹಳ್ಳಿಯಲ್ಲಿ ನೆಲೆಸಿರುವ ಇಬ್ಬರು ವಿದ್ಯಾರ್ಥಿಗಳು ಘಟನೆಯ ಬಗ್ಗೆ ಹೆತ್ತವರಿಗೆ ವಿವರಿಸಿದ್ದರು.

‘‘ಘಟನೆ ಬೆಳಕಿಗೆ ಬಂದ ಬಳಿಕ ಹಾಸ್ಟೆಲ್ ಮೇಲ್ವಿಚಾರಕ ಐವರು ವಿದ್ಯಾರ್ಥಿಗಳು ಉಮರ್‌ಕೋಟ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಎಲ್ಲ ಶಾಲೆಗಳನ್ನು ಶಿಕ್ಷೆ ಮುಕ್ತ ವಲಯಗಳನ್ನಾಗಿ ಘೋಷಿಸಲಾಗಿದೆ. ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದೇನೆ’’ ಎಂದು ಬ್ಲಾಕ್ ಶಿಕ್ಷಣ ಅಧಿಕಾರಿ ಬಿಕಾಶ್ ಚಂದ್ರ ಸರ್ಕಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News