19 ತಿಂಗಳ ಜೈಲುವಾಸದಲ್ಲಿ ಲಾಲೂ ಆಸ್ಪತ್ರೆಯಲ್ಲಿ ಕಳೆದದ್ದು ಎಷ್ಟು ತಿಂಗಳು ಗೊತ್ತೇ?

Update: 2019-07-28 08:44 GMT

ಪಾಟ್ನಾ: 19 ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿರುವ ರಾಷ್ಟ್ರೀಯ ಜನತಾದಳ (ಆರ್ ಜೆ ಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (77) ಅವರು ಇದುವರೆಗೆ 17 ತಿಂಗಳನ್ನು ಆಸ್ಪತ್ರೆಯಲ್ಲೇ ಕಳೆದಿದ್ದಾರೆ. ಆದರೆ ಇನ್ನೂ ಗುಣಮುಖರಾಗಿಲ್ಲ.

ಲಾಲೂ ಸದ್ಯಕ್ಕೆ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆ ಎನಿಸಿದ ರಾಂಚಿಯ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‍ನ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 42 ಮಂದಿ ಪೊಲೀಸರ ಸರ್ಪಕಾವಲಿನಲ್ಲಿದ್ದಾರೆ.

"ಪ್ರತಿ ತಿಂಗಳು ಆರ್‍ಐಎಂಎಸ್ ನಿರ್ದೇಶಕರು ಪ್ರಸಾದ್ ಆರೋಗ್ಯದ ಬಗ್ಗೆ ವರದಿ ಸಲ್ಲಿಸುತ್ತಾರೆ. ಆದರೆ ಯಾವ ವರದಿ ಕೂಡಾ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಉಲ್ಲೇಖಿಸಿಲ್ಲ. ಧನಾತ್ಮಕ ವರದಿ ಬಂದ ಬಳಿಕ ಅವರನ್ನು ಜೈಲಿಗೆ ವರ್ಗಾಯಿಸಲಾಗುತ್ತದೆ" ಎಂದು ಬಂಧೀಖಾನೆ ವಿಭಾಗದ ಮಹಾನಿರೀಕ್ಷಕ ವೀರೇಂದ್ರ ಭೂಷಣ್ ಹೇಳಿದ್ದಾರೆ.

ಮೇವು ಹಗರಣಕ್ಕೆ ಸಂಬಂಧಿಸಿದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿರುವ ಲಾಲೂ, 2017ರ ಡಿಸೆಂಬರ್ 23ರಿಂದ ಜೈಲಿನಲ್ಲಿದ್ದಾರೆ. ಒಂದು ಪ್ರಕರಣದಲ್ಲಿ ಈ ತಿಂಗಳು ಜಾಮೀನು ಪಡೆದಿದ್ದಾರೆ. ಜೈಲುಪಾಲಾದ ಎರಡೇ ತಿಂಗಳಲ್ಲಿ ಅವರ ಆರೋಗ್ಯ ಸ್ಥಿತಿ ಉಲ್ಬಣಿಸಿದೆ.

ಲಾಲೂ ಅವರನ್ನು ರಿಮ್ಸ್ ಗೆ ದಾಖಲಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸದಿಲ್ಲಿಯ ಎಐಐಎಂಎಸ್‍ಗೆ ಸೇರಿಸಲಾಗಿತ್ತು. 2018ರ ಮೇ ತಿಂಗಳಲ್ಲಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ರಿಮ್ಸ್‍ಗೆ ಮತ್ತೆ ಕಳುಹಿಸಲಾಗಿತ್ತು. ಬಳಿಕ ಪರೋಲ್‍ನಲ್ಲಿ ಹೊರಬಂದು ಮಗನ ವಿವಾಹದಲ್ಲಿ ಲಾಲೂ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News