ನ್ಯಾಯಾಲಯದಲ್ಲಿ ಪೊಲೀಸ್ ಪೇದೆಯ ಸಮವಸ್ತ್ರ ಬಿಚ್ಚಿಸಿದ ನ್ಯಾಯಾಧೀಶ ಎತ್ತಂಗಡಿ

Update: 2019-07-28 10:34 GMT

ಆಗ್ರಾ: ನ್ಯಾಯಾಲಯದಲ್ಲಿ ತಮ್ಮನ್ನು ಅವಮಾನಿಸಿ, ಖಾಕಿ ಸಮವಸ್ತ್ರ ಬಿಚ್ಚಿಸಿ ನ್ಯಾಯಾಲಯ ಕೊಠಡಿಯಲ್ಲಿ ಅರ್ಧಗಂಟೆ ನಿಲ್ಲಿಸಲಾಗಿದೆ ಎಂದು ಉತ್ತರ ಪ್ರದೇಶದ ಆಗ್ರಾ ಪೊಲೀಸ್ ಪೇದೆಯೊಬ್ಬರು ಆಪಾದಿಸಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ 38 ವರ್ಷ ಸೇವೆ ಸಲ್ಲಿಸಿದ ಘುರೇಲಾಲ್ (58) ಇತರ ಮೂವರು ಪೊಲೀಸರ ಜತೆ ಸೇರಿ ಶುಕ್ರವಾರ ಬೆಳಗ್ಗೆ ಪೊಲೀಸ್ ವ್ಯಾನ್‌ನಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆ ತಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೆಚ್ಚುವರಿ ಮುಖ್ಯ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಸಂತೋಷ್ ಕುಮಾರ್ ಯಾದವ್ ಅವರಿಗೆ ಕಾರ್ ಪಾಸ್ ನೀಡಲು ಘುರೇಲಾಲ್ ವಿಫಲವಾದ ಹಿನ್ನೆಲೆಯಲ್ಲಿ ಹೀಗೆ ಅವಮಾನಿಸಲಾಯಿತು ಎಂದು ಆಪಾದಿಸಲಾಗಿದೆ. ನ್ಯಾಯಾಧೀಶರ ಕಾರಿಗೆ ಪಾಸ್ ನೀಡದ ಹಿನ್ನೆಲೆಯಲ್ಲಿ ಶಿಕ್ಷಾ ಕ್ರಮವಾಗಿ ಸಮವಸ್ತ್ರ ಬಿಚ್ಚಿಸಿ ಅರ್ಧ ಗಂಟೆ ಕೋರ್ಟ್‌ ಹಾಲ್‌ನಲ್ಲಿ ನಿಲ್ಲಿಸಲಾಗಿತ್ತು ಎಂದು ಘುರೇಲಾಲ್ ದೂರಿದ್ದಾಗಿ ಎಸ್‌ಎಸ್‌ಪಿ ಬಬ್ಲೂ ಕುಮಾರ್ ತಿಳಿಸಿದ್ದಾರೆ.

ಹೀಗೆ ಸಾರ್ವಜನಿಕವಾಗಿ ಮಾಡಿದ ಅವಮಾನದಿಂದಾಗಿ ತಮಗೆ ಆಘಾತವಾಗಿದ್ದು, ಸ್ವಯಂನಿವೃತ್ತಿ ನೀಡಬೇಕು ಎಂದು ಕೋರಿ ಘುರೇಲಾಲ್ ಆಗ್ರಾಹದ ಹಿರಿಯ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದರು. ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರು ಕೂಡಾ ಪೇದೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರನ್ನು ವರ್ಗಾಯಿಸಲಾಗಿದೆ.

ಕೋರ್ಟ್ ಹಾಲ್‌ನಲ್ಲಿ ಪೊಲೀಸ್ ಪೇದೆಯ ಸಮವಸ್ತ್ರ ಬಿಚ್ಚಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಹಂತದಲ್ಲಿ ವಿಷಯ ಪ್ರಸ್ತಾಪಿಸಿದ್ದೇವೆ. ಪ್ರತಿ ಪೊಲೀಸ್ ಸಿಬ್ಬಂದಿಯ ಘನತೆಯ ಪರವಾಗಿ ನಾವು ನಿಲ್ಲುತ್ತೇವೆ. ಸಮವಸ್ತ್ರದ ಪಡೆಗಳನ್ನು ಗೌರವದಿಂದ ಕಾಣುವಂತೆ ಇಡೀ ಸಮಾಜಕ್ಕೆ ಕೋರುತ್ತಿದ್ದೇವೆ" ಎಂದು ಡಿಜಿಪಿ ಓಂಪ್ರಕಾಶ್ ಸಿಂಗ್ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News