×
Ad

ಉಪಗ್ರಹದಿಂದ 38,900 ಕಾಡ್ಗಿಚ್ಚು ಪ್ರಕರಣ ಪತ್ತೆ

Update: 2019-07-28 23:04 IST

ಹೊಸದಿಲ್ಲಿ, ಜು.28: ಕಳೆದ ವರ್ಷ ಉಪಗ್ರಹಗಳು 38,900 ಕಾಡ್ಗಿಚ್ಚು ಪ್ರಕರಣಗಳನ್ನು ಪತ್ತೆಹಚ್ಚಿವೆ ಎಂದು ಬಾಹ್ಯಾಕಾಶ ಇಲಾಖೆಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

ಪ್ರತೀ ವರ್ಷ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಹಬ್ಬುತ್ತದೆ. 2018ರ ಫೆಬ್ರವರಿಯಿಂದ ಜೂನ್‌ವರೆಗೆ ಉಪಗ್ರಹಗಳ ಮಾಹಿತಿ ಆಧರಿಸಿ ಆಯಾ ರಾಜ್ಯಗಳ ಅರಣ್ಯ ಇಲಾಖೆಗಳು ಸಕ್ರಿಯವಾಗಿ ಕಾಡ್ಗಿಚ್ಚು ನಂದಿಸುವ ಕಾರ್ಯ ನಡೆಸಿವೆ . ಕಾಡ್ಗಿಚ್ಚು ಕುರಿತ ಮಾಹಿತಿಯನ್ನು ಡೆಹರಾಡೂನ್‌ನಲ್ಲಿರುವ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆಗೆ ನೀಡಲಾಗುತ್ತದೆ ಎಂದು ವರದಿ ತಿಳಿಸಿದ್ದು ವರದಿಯನ್ನು ಈಗ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನೆದುರು ಮಂಡಿಸಲಾಗಿದೆ.

 2018ರ ಮಾರ್ಚ್‌ನಲ್ಲಿ ತಮಿಳುನಾಡಿನ ಕುರಂಗಣಿ ಬೆಟ್ಟದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನ ಮಾಹಿತಿಯನ್ನು ಉಪಗ್ರಹಗಳೇ ನೀಡಿದ್ದವು. ಅಲ್ಲದೆ 2018ರ ಮೇ 22ರಂದು ವೈಷ್ಣೋದೇವಿ ದೇವಸ್ಥಾನದ ಪರಿಸರದಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿನ ಮಾಹಿತಿಯನ್ನೂ ಉಪಗ್ರಹಗಳು ನೀಡಿದ್ದವು. 2019ರ ಮಾರ್ಚ್ ವರೆಗೆ 15,657 ಸಕ್ರಿಯ ಕಾಡ್ಗಿಚ್ಚು ಪ್ರದೇಶಗಳನ್ನು ಗುರುತಿಸಲಾಗಿದೆ. ಕರ್ನಾಟಕದ ಬಂಡೀಪುರದಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ ಸುಟ್ಟುಹೋದ ಪ್ರದೇಶಗಳ ನಕ್ಷೆಯನ್ನು ರಚಿಸಲಾಗುತ್ತಿದ್ದು ಈ ಬಗ್ಗೆ ಮಾಹಿತಿಯನ್ನು ರಾಜ್ಯದ ಅರಣ್ಯ ಇಲಾಖೆಗೆ ಒದಗಿಸಲಾಗುತ್ತದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News