ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣ ಸಿಬಿಐಗೆ ಹಸ್ತಾಂತರಿಸಲು ಪೊಲೀಸರ ನಿರ್ಧಾರ

Update: 2019-07-29 13:44 GMT

ಲಕ್ನೋ, ಜು.29: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿ ಆಕೆ ಸಹಿತ ಆಕೆಯ ವಕೀಲ ಗಂಭೀರ ಗಾಯಗೊಂಡು ಇತರ ಇಬ್ಬರು ಸಂಬಂಧಿ ಮಹಿಳೆಯರು ಮೃತಪಟ್ಟ ಘಟನೆಯ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಉತ್ತರ ಪ್ರದೇಶ ಪೊಲೀಸರು ನಿರ್ಧರಿಸಿದ್ದಾರೆ.

ಸಂತ್ರಸ್ತೆಯ ಕುಟುಂಬ ಮಾಡಿದ ಮನವಿಯನ್ನು ಪೊಲೀಸರು ಸರಕಾರಕ್ಕೆ ಹಸ್ತಾಂತರಿಸಿದ್ದು, ರಾಜ್ಯ ಸರಕಾರ ಈ ಪತ್ರವನ್ನು ಕೇಂದ್ರ ಸರಕಾರಕ್ಕೆ ಇನ್ನಷ್ಟೇ ಕಳುಹಿಸಬೇಕಿದೆ.

ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಈಗ ಜೈಲಿನಲ್ಲಿದ್ದಾನೆ. ರವಿವಾರ ಉನ್ನಾವೋ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ರಾಯ್ ಬರೇಲಿಯ ಗುರುಬಕ್ಷ್ ಗಂಜ್ ಎಂಬಲ್ಲಿ ಟ್ರಕ್  ಢಿಕ್ಕಿಯಾಗಿತ್ತು.  ಈ ಅಪಘಾತದ ಬಗ್ಗೆ  ಆಕೆಯ ಕುಟುಂಬಿಕರು ಸಂಶಯ ವ್ಯಕ್ತಪಡಿಸಿ, ಇದರ ಹಿಂದೆ ಶಾಸಕನ ಕೈವಾಡವಿರಬಹುದೆಂದು ಆರೋಪಿಸಿ ದೂರು ನೀಡಿದ್ದರು.

ಘಟನೆಯ ನಂತರ ಸಂತ್ರಸ್ತೆ ಮತ್ತಾಕೆಯ ಕುಟುಂಬಕ್ಕೆ ದಿನದ 24 ಗಂಟೆ ಭದ್ರತೆಯೊದಗಿಸಲು ಒಬ್ಬ ಗನ್ ಮ್ಯಾನ್ ಹಾಗೂ ಇಬ್ಬರು ಮಹಿಳಾ ಕಾನ್‍ಸ್ಟೇಬಲ್‍ಗಳನ್ನು ನಿಯೋಜಿಸಲಾಗಿದೆ ಎಂದು ಉನ್ನಾವೋ ಎಸ್‍ಪಿ ಎಂ ಪಿ ವರ್ಮ ಹೇಳಿದ್ದಾರೆ.

ಅಪಘಾತ ನಡೆಸಿದ ಟ್ರಕ್ ನ ರಿಜಿಸ್ಟ್ರೇಶನ್ ಪ್ಲೇಟ್ ಗೆ ಕಪ್ಪು ಬಣ್ಣ ಹಚ್ಚಲಾಗಿದ್ದನ್ನು ಪೊಲೀಸರು ಗಮನಿಸಿದ್ದಾರೆ. ಅದರ ಮೂಲ ರಿಜಿಸ್ಟ್ರೇಶನ್ ಸಂಖ್ಯೆ ಯುಪಿ 71 ಎಟಿ 8300 ಎಂಬುದನ್ನೂ ಪೊಲೀಸರು ಪತ್ತೆ ಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News