×
Ad

ಅಸ್ತಿ ಮುಟ್ಟುಗೋಲು ಪ್ರಶ್ನಿಸಿದ ಮಲ್ಯ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

Update: 2019-07-29 23:28 IST

ಹೊಸದಿಲ್ಲಿ, ಜು.26: ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿರುವುದನ್ನು ಪ್ರಶ್ನಿಸಿ, ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿಸಿದೆ.

ಮಲ್ಯ ಅವರ ವಕೀಲ ಎಫ್.ಎಸ್. ನಾರಿಮನ್ ವಾದವನ್ನು ಅಲಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠವು ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡಿತೆಂದು ವರದಿಗಳು ತಿಳಿಸಿವೆ. ಅರ್ಜಿಯ ವಿಚಾರಣೆಯನ್ನು ಆಗಸ್ಟ್ 2ರಂದು ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸೇರಿದ ಸೊತ್ತುಗಳನ್ನು ಮಾತ್ರವೇ ವಶಪಡಿಸಿಕೊಳ್ಳಬೇಕೆಂದು ಮಲ್ಯ ಅರ್ಜಿಯಲ್ಲಿ ವಾದಿಸಿದ್ದರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ತನ್ನ ಆಸ್ತಿಗಳ ಮುಟ್ಟುಗೋಲಿಗೆ ಸಂಬಂಧಿಸಿ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಲಾಪಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಮಲ್ಯ ಅವರು ಜುಲೈ 11ರಂದು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಮಲ್ಯ ಅವರು ತಲೆಮರೆಸಿಕೊಂಡ ಅರ್ಥಿಕ ಅಪರಾಧಿಯೆಂದು ವಿಶೇಷ ನ್ಯಾಯಾಲಯ ಘೋಷಿಸಿತ್ತು.

ವಿಜಯ್ ಮಲ್ಯ ಅವರು ಭಾರತದ 17 ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಮರುಪಾವತಿಸದೆ ಬಾಕಿಯುಳಿಸಿದ್ದಾರೆ. 2016ರ ಮಾರ್ಚ್‌ನಲ್ಲಿ ಬ್ರಿಟನ್‌ಗೆ ಪರಾರಿಯಾಗಿರುವ ಮಲ್ಯ ಅವರನ್ನು ಗಡಿಪಾರುವಂತೆ ಬ್ರಿಟಿಶ್ ಸರಕಾರಕ್ಕೆ ಭಾರತ ಮನವಿ ಸಲ್ಲಿಸಿದ್ದು, ಅಲ್ಲಿನ ನ್ಯಾಯಾಲಯದಲ್ಲಿ ಆ ಬಗ್ಗೆ ವಿಚಾರಣೆ ನಡೆಯುತ್ತಿದೆ.

ತನ್ನ ಗಡಿಪಾರು ಆದೇಶವನ್ನು ಪ್ರಶ್ನಿಸಿ ಮೊಕದ್ದಮೆ ಹೂಡಲು ಮಲ್ಯ ಅವರಿಗೆ ಬ್ರಿಟನ್ ಹೈಕೋರ್ಟ್ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News