ಹಾಲು ಕುಡಿಯುವ ಮುನ್ನ ಇದನ್ನು ಓದಲೇಬೇಕು...

Update: 2019-07-30 06:09 GMT

ಭೋಪಾಲ್ : ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಈ ಇಬ್ಬರು ಸಹೋದರರು ಏಳು ವರ್ಷ ಹಿಂದೆ ಪಕ್ಕದ ಡೇರಿಗಳಿಗೆ ಮೋಟರ್‌ ಸೈಕಲ್‌ನಲ್ಲಿ ಹಾಲು ಒಯ್ಯುತ್ತಿದ್ದರು. ಇಂದು ಇವರ ಬಳಿ ಎರಡು ಕೋಟಿ ರೂ. ಮೌಲ್ಯದ ಶೀತಲೀಕರಣ ಘಟಕ, ಹಾಲು ಟ್ಯಾಂಕರ್‌ಗಳು, ಮೂರು ಬಂಗಲೆಗಳು, ಎಸ್‌ಯುವಿ, ಕೃಷಿ ಭೂಮಿ ಇದ್ದು, ಅಗರ್ಭ ಶ್ರೀಮಂತರಾಗಿದ್ದಾರೆ !

ಈ ಸಹೋದರರಿಗೆ ಲಾಟರಿ ಹೊಡೆಯಲಿಲ್ಲ; ಅಥವಾ ಇದು ಪವಾಡವೂ ಅಲ್ಲ. ದೇವೇಂದ್ರ ಗುರ್ಜರ್ (42) ಮತ್ತು ಜೈವೀರ್ ಗುರ್ಜರ್ (40) ಕೃತಕ ಹಾಲು ಮತ್ತು ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ದಂಧೆ ಮೂಲಕ ಸಂಗ್ರಹಿಸಿದ ಸಂಪತ್ತು ಇದು.

ಇದು ಮನುಷ್ಯ ಆರೋಗ್ಯಕ್ಕೆ ನಿಧಾನ ವಿಷ ಎಂದು ಈ ಬಗ್ಗೆ ತನಿಖೆ ನಡೆಸಿದ ಮಧ್ಯಪ್ರದೇಶ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಪಡೆ ಹೇಳಿದೆ.

ದೇವೇಂದ್ರ ಗುರ್ಜರ್ ಜತೆಗೆ ಐದರಿಂದ ಏಳು ವರ್ಷಗಳಲ್ಲಿ ಕೃತಕ ಹಾಲು ಮಾರಾಟದ ಮೂಲಕ ದಿಢೀರ್ ಶ್ರೀಮಂತರಾದ ಚಂಬಲ್ ಪ್ರದೇಶದ ಇತರ ಹಲವು ಮಂದಿ ಡೇರಿ ಮಾಲಕರೂ ಎಸ್‌ಐಟಿ ದಾಖಲಿಸಿದ ಎಫ್‌ಐಆರ್‌ನಲ್ಲಿದ್ದಾರೆ. ಕೇವಲ ಮಧ್ಯಪ್ರದೇಶ ಮಾತ್ರವಲ್ಲದೇ ಹರ್ಯಾಣ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಕೂಡಾ ಇವರ ಜಾಲ ಹಬ್ಬಿತ್ತು ಎಂದು ತನಿಖೆಯಿಂದ ದೃಢಪಟ್ಟಿದೆ.

ಗ್ಲೂಕೋಸ್, ಯೂರಿಯಾ, ರಿಫೈಂಡ್ ಆಯಿಲ್, ಹಾಲಿನ ಪುಡಿ ಮತ್ತು ನೀರು ಬೆರೆಸಿ ಕೃತಕ ಹಾಲು ಉತ್ಪಾದಿಸಲಾಗುತ್ತದೆ. ಉಳಿದಂತೆ ಹೈಡ್ರೋಜನ್ ಪೆರಾಕ್ಸೈಡ್ ಕೂಡಾ ಬಳಸಲಾಗುತ್ತದೆ. ಕೃತಕ ಚೀಸ್ ಮತ್ತು ಮಾವಾದಂಥ ಉಪ ಉತ್ಪನ್ನಗಳನ್ನೂ ತಯಾರಿಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಈ ಜಾಲದ ರೂವಾರಿಗಳಾದ ದೇವೇಂದ್ರ ಗುರ್ಜರ್, ಜೈವೀರ್ ಗುರ್ಜರ್, ರಾಮನರೇಶ್ ಗುರ್ಜರ್, ದಿನೇಶ್ ಶರ್ಮಾ, ಸಂತೋಷ್ ಸಿಂಗ್ ಮತ್ತು ರಾಜೀವ್ ಗುಪ್ತಾ ದೊಡ್ಡ ಮೊತ್ತದ ಸಂಪತ್ತು ಕ್ರೋಢೀಕರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಅವರ ಜೀವನ ಮಟ್ಟ ಕೆಲವೇ ವರ್ಷಗಳಲ್ಲಿ ಪವಾಡಸದೃಶವಾಗಿ ಬದಲಾಗಿದೆ.

ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರು ಕೋಟ್ಯಧಿಪತಿಗಳಾಗಿದ್ದಾರೆ. ಈ ದಂಧೆಯ ಆರ್ಥಿಕ ಆಯಾಮಗಳ ಬಗ್ಗೆ ತನಿಖೆ ನಡೆಸಿ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗುವುದು ಎಂದು ಎಸ್‌ಟಿಎಫ್ ಅಧೀಕ್ಷಕ ರಾಜೇಶ್ ಭಡೋರಿಯಾ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅನ್ವಯ ವಂಚನೆ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News