‘ಇರಾನಿ ಗ್ಯಾಂಗ್’ ಭೀತಿ ಹುಟ್ಟಿಸಿ ಕರಾವಳಿ ಜಿಲ್ಲೆಗಳಲ್ಲಿ ಗುಂಪು ಹತ್ಯೆಗಳಿಗೆ ಸಂಚು!?

Update: 2019-07-30 10:24 GMT

#ಸ್ಪಷ್ಟನೆ ನೀಡಿದ ಉಡುಪಿ ಜಿಲ್ಲಾ ಪೊಲೀಸ್

ಮಂಗಳೂರು, ಜು.30: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳು ಭಾರೀ ಆತಂಕಕ್ಕೆ ಹಾಗೂ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಟೀಕೆಗೆ ಕಾರಣವಾಗುತ್ತಿರುವ ನಡುವೆ ಸುಶಿಕ್ಷಿತ ಕರಾವಳಿ ಜಿಲ್ಲೆಗಳಲ್ಲಿ ‘ಗುಂಪು ಹತ್ಯೆಯ ಸಂಪ್ರದಾಯ’ವನ್ನು ಆರಂಭಿಸುವ ಪ್ರಾಥಮಿಕ ಮಟ್ಟದ ಸಂಚುಗಳು ನಡೆಯುತ್ತಿದ್ದು, ಈ ಬಗ್ಗೆ ಜನರು ಎಚ್ಚರ ವಹಿಸಬೇಕಾಗಿದೆ.

ಈಗಾಗಲೇ ದೇಶದ ಹಲವೆಡೆ ಕಳ್ಳತನದ ಶಂಕೆಯಲ್ಲಿ, ಮನೆಗೆ ನುಗ್ಗಿದ್ದಕ್ಕಾಗಿ, ಕಳ್ಳತನ ತಡೆದದ್ದಕ್ಕಾಗಿ… ಹೀಗೆ ವಿನಾಕಾರಣ ಜನರನ್ನು ಥಳಿಸಿ ಕೊಲ್ಲಲಾಗುತ್ತಿದೆ. ಆದರೆ ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಇಂತಹ ಘಟನೆಗಳು ಸ್ವಲ್ಪ ಮಟ್ಟಿಗೆ ಕಡಿಮೆ ಎನ್ನಬಹುದು. ಅದರಲ್ಲೂ ಕರ್ನಾಟಕದಲ್ಲಿ ಇಂತಹ ಕೆಲವೇ ಘಟನೆಗಳು ನಡೆದಿವೆ. ಇದಕ್ಕೆ ಕಾರಣ ರಾಜ್ಯದ ಜನರು ಇಂತಹ ಕೃತ್ಯಗಳ ಬಗ್ಗೆ ಜಾಗೃತರಾಗಿರುವುದು ಮತ್ತು ಸುಶಿಕ್ಷಿತರಾಗಿರುವುದು. ರಸ್ತೆ, ನೀರಿನಂತಹ ಮೂಲಸೌಕರ್ಯಗಳಿಲ್ಲದ, ನಿರುದ್ಯೋಗಗಳಿಂದ ತತ್ತರಿಸಿರುವ ಉತ್ತರ ಪ್ರದೇಶಗಳಂತಹ, ಸಾಕ್ಷರತೆ ಅತ್ಯಂತ ಕಡಿಮೆಯಿರುವ ರಾಜ್ಯಗಳಲ್ಲಿ ಹೆಚ್ಚಾಗಿ ಇಂತಹ ಹೇಯ ಕೃತ್ಯಗಳು ನಡೆಯುತ್ತಿವೆ.

ಇದೀಗ ಈ ಅಮಾನವೀಯ ಕೃತ್ಯದ ಸರಣಿ ಕರಾವಳಿ ಜಿಲ್ಲೆಗಳಲ್ಲಿ ಆರಂಭವಾಗಬಹುದಾದ ಭೀತಿ ಎದುರಾಗಿದೆ. ಅದಕ್ಕೆ ಆರಂಭವೆಂಬಂತೆ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಯಾಪ್, ಫೇಸ್ ಬುಕ್ ಗಳಲ್ಲಿ ದುಷ್ಕರ್ಮಿಗಳು ಸಂದೇಶವೊಂದನ್ನು ಹರಡುತ್ತಿದ್ದಾರೆ ಮತ್ತು ಈ ಸಂದೇಶಕ್ಕೆ ಕುಂದಾಪುರ ಸಬ್ ಇನ್ಸ್ ಪೆಕ್ಟರ್ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಕಿಡಿಗೇಡಿಗಳು ವೈರಲ್ ಮಾಡಿರುವ ಸಂದೇಶ ಈ ರೀತಿಯಿದೆ.

“ಸಾರ್ವಜನಿಕರ ಗಮನಕ್ಕೆ

ಕುಂದಾಪುರ ಪೊಲೀಸ್ ಠಾಣೆ ವತಿಯಿಂದ ಕೋರಿಕೊಳ್ಳುವುದೇನೆಂದರೆ,

ಕುಂದಾಪುರ ತಾಲ್ಲೂಕಿನ ಗ್ರಾಮಗಳ ಸುತ್ತಮುತ್ತ ಯಾರೇ ಕಂಬಳಿ, ಇತರೆ ಹೊದಿಕೆ ಬೆಡ್ ಶೀಟ್, ಗೃಹಪಯೋಗಿ ಸಂಬಂಧಿತ ವಸ್ತುಗಳು ಮಾರಲು ತಮ್ಮ ಬಳಿ ಬಂದಲ್ಲಿ ಅವರ ಗುರುತಿನ ಚೀಟಿ ಹಾಗೂ ವಿಳಾಸವನ್ನು ಖಾತರಿ ಮಾಡಿಕೊಂಡು ಕೊಳ್ಳುವುದು. ಏಕೆಂದರೆ ಮಾರುವೇಷದಲ್ಲಿ ಕಂಬಳಿ ಮಾರುವವರಾಗಿ ಬಂದು ತಮ್ಮ ಮನೆಯ ಸಂಪೂರ್ಣ ವಿವರ ತಿಳಿದುಕೊಂಡು ಮನೆಕಳ್ಳತನ, ದರೋಡೆ ಸುಲಿಗೆ ಇತ್ಯಾದಿ ಕಳ್ಳತನಗಳನ್ನು ‘ಇರಾನಿ ಗ್ಯಾಂಗ್’ ಎಂಬ ಹೆಸರಿನ ಹೊರ ರಾಜ್ಯಗಳಿಂದ ಬಂದ ಕಳ್ಳರು, ಕಳ್ಳತನ ದರೋಡೆ ಸುಲಿಗೆ ಅತ್ಯಾಚಾರ ಮಾಡುತ್ತಿದ್ದು ಅವರ ಮೇಲೆ ನಿಗಾ ಇಡಲು ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯು ತಿಳಿಸಿರುತ್ತದೆ .

ಆದ್ದರಿಂದ ಈ ಮಾಹಿತಿಯನ್ನು ಆದಷ್ಟು ಎಲ್ಲಾ ಸಾರ್ವಜನಿಕರಿಗೆ ಹಂಚಿಕೊಳ್ಳುವುದು. ಹೊರ ರಾಜ್ಯದ ಮಾರಾಟಗಾರರ ಬಗ್ಗೆ ಮಾಹಿತಿಯನ್ನು ನಿಮ್ಮ ನಿಮ್ಮ ಬೀಟ್ ಸಿಬ್ಬಂದಿಗೆ ಅಥವಾ ಕುಂದಾಪುರ ಪೊಲೀಸ್ ಠಾಣೆಗೆ ನೀಡುವುದು.

ಇಂತಿ,

ಕುಂದಾಪುರ, ಪೋಲಿಸ್ ಠಾಣೆ.

(ಇದರೊಂದಿಗೆ ಕುಂದಾಪುರ ಠಾಣೆ ಮತ್ತು ಸಬ್ ಇನ್ಸ್ ಪೆಕ್ಟರ್ ಅವರ ಫೋನ್ ನಂಬರ್ ಗಳನ್ನು ನೀಡಲಾಗಿತ್ತು)

ದುಷ್ಕರ್ಮಿಗಳು ಹರಡುತ್ತಿರುವ ಈ ಸಂದೇಶದಲ್ಲಿ ಯಾವುದೇ ಸತ್ಯಾಂಶಗಳಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಕಂಬಳಿ, ಹೊದಿಕೆ, ಬೆಡ್‌ ಶೀಟ್, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರ ಮಾರುವೇಷದಲ್ಲಿ ‘ಇರಾನಿ ಗ್ಯಾಂಗ್’ ಎಂಬ ಹೆಸರಿನ ಹೊರರಾಜ್ಯಗಳ ಕಳ್ಳರು ಮನೆಕಳ್ಳತನ, ದರೋಡೆ ಸುಲಿಗೆಗಳನ್ನು ಮಾಡಿರುವ ಯಾವುದೇ ಘಟನೆಗಳು ಉಡುಪಿ ಜಿಲ್ಲೆಯಲ್ಲಿ ಈವರೆಗೆ ವರದಿಯಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಅನಾವಶ್ಯಕವಾಗಿ ಭಯಭೀತರಾಗುವುದು ಬೇಡ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಆದರೂ ಕೂಡ ಸಾರ್ವಜನಿಕರು ಅವರ ಮನೆಯ ಬಳಿ ಯಾವುದೇ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರುವ ವ್ಯಕ್ತಿಗಳ ಬಗ್ಗೆ ಜಾಗೃತೆಯಿಂದ ಇರಬೇಕು. ಅವರನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಕರೆಯಬಾರದು. ಅವರೊಂದಿಗೆ ನಿಮ್ಮ ನೆರೆಕರೆಯವರ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಇಲಾಖೆ ತಿಳಿಸಿದೆ.

ಮನೆಯಲ್ಲಿ ಒಂಟಿ ಮಹಿಳೆಯರು ಇರುವಂತಹ ಸಂದರ್ಭದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗಳನ್ನು ಮನೆಯ ಆವರಣದ ಒಳಗೆ ಸೇರಿಸಬಾರದು. ಮನೆಯ ಬಳಿ ಯಾರಾದರೂ ಅಪರಿಚಿತರು ಅಥವಾ ಮಾರಾಟಗಾರರು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ನಂಬರ್ 100 ಅಥವಾ 0820-2526444ಕ್ಕೆ ಕರೆ ಮಾಡಬೇಕು ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News