ಕಾಂಗ್ರೆಸ್, ಎನ್ ಸಿಪಿಗೆ ಆಘಾತ: ಬಿಜೆಪಿ ಸೇರಲಿರುವ ನಾಲ್ವರು ಶಾಸಕರು

Update: 2019-07-30 11:00 GMT

ಮುಂಬೈ, ಜು.30: ಮಹಾರಾಷ್ಟ್ರದ ವಿಪಕ್ಷಗಳಿಗೆ ದೊಡ್ಡ ಹೊಡೆತ ನೀಡುವ ಬೆಳವಣಿಗೆಯಲ್ಲಿ ಮೂವರು ಎನ್‍ ಸಿಪಿ ಶಾಸಕರು ಹಾಗೂ ಒಬ್ಬ ಕಾಂಗ್ರೆಸ್ ಶಾಸಕ  ಮಂಗಳವಾರ ತಮ್ಮ  ರಾಜೀನಾಮೆ ಪತ್ರಗಳನ್ನು ಸ್ಪೀಕರ್ ಹರಿಭಾವು ಬಗ್ಡೆ ಅವರಿಗೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿರುವ ಎನ್‍ಸಿಪಿ ಶಾಸಕರುಗಳಾದ ವೈಭವ್ ಪಿಚಡ್, ಸಂದೀಪ್ ನಾಯ್ಕ್, ಶಿವೇಂದ್ರ ರಾಜೆ ಹಾಗೂ ಕಾಂಗ್ರೆಸ್ ಶಾಸಕ ಕಾಳಿದಾಸ್ ಕೊಲಂಬ್ಕರ್  ನಾಳೆ ಬಿಜೆಪಿ ಸೇರಲಿದ್ದಾರೆ.

ಕಳೆದ ವಾರವಷ್ಟೇ ಎನ್‍ಸಿಪಿಯ ಮುಂಬೈ ಘಟಕದ ಅಧ್ಯಕ್ಷ ಸಚಿನ್ ಆಹಿರ್ ಪಕ್ಷ ತೊರೆದು ಶಿವಸೇನೆ ಸೇರಿದ್ದರು. ಎನ್‍ಸಿಪಿಯ ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ವಾಘ್ ಕೂಡ  ಪಕ್ಷ ತೊರೆದಿದ್ದು, ಅವರು ಬಿಜೆಪಿ ಸೇರಲಿದ್ದಾರೆಂಬ ಮಾಹಿತಿಯಿದೆ.

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಪಕ್ಷ ನಾಯಕರುಗಳಾದ ಎನ್‍ಸಿಪಿಯ ಮಹಾರಾಷ್ಟ್ರ ಘಟಕ ಅಧ್ಯಕ್ಷ ಜಯಂತ್ ಪಾಟೀಲ್, ಎಂಎನ್‍ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ರೈತ ನಾಯಕ ರಾಜು ಶೆಟ್ಟಿ ಮುಂಬೈಯಲ್ಲಿ ಚರ್ಚೆ ನಡೆಸಿದ್ದಾರೆ.

ಒಟ್ಟು 50 ಮಂದಿ ಕಾಂಗ್ರೆಸ್ ಹಾಗೂ ಎನ್‍ಸಿಪಿ ಶಾಸಕರು  ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಬಿಜೆಪಿ ಸೇರಲಿದ್ದಾರೆ ಎಂದು ಕಳೆದ ವಾರವಷ್ಟೇ ಹಿರಿಯ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News