ಗ್ರಾಹಕ ರಕ್ಷಣಾ ಮಸೂದೆಗೆ ಲೋಕಸಭೆಯ ಅಂಗೀಕಾರ

Update: 2019-07-30 14:32 GMT

ಹೊಸದಿಲ್ಲಿ,ಜು.30: ಗ್ರಾಹಕ ಹಕ್ಕುಗಳ ರಕ್ಷಣೆ ಮತ್ತು ಜಾರಿಗಾಗಿ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ(ಸಿಸಿಪಿಎ)ದ ಸ್ಥಾಪನೆಗೆ ಅವಕಾಶ ಕಲ್ಪಿಸುವ ಗ್ರಾಹಕ ರಕ್ಷಣಾ ಮಸೂದೆಯನ್ನು ಲೋಕಸಭೆಯು ಮಂಗಳವಾರ ಅಂಗೀಕರಿಸಿದೆ.

ಮಸೂದೆಯ ಕುರಿತು ಮಾತನಾಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮವಿಲಾಸ ಪಾಸ್ವಾನ್ ಅವರು,ಒಬ್ಬನೇ ಗ್ರಾಹಕ ದೂರು ಸಲ್ಲಿಸಿದರೂ ಸಿಸಿಪಿಎ ತಕ್ಷಣವೇ ಕ್ರಮವನ್ನು ಕೈಗೊಳ್ಳಲಿದೆ. ಗ್ರಾಹಕರ ಕುಂದುಕೊರತೆಗಳನ್ನು ಬಗೆಹರಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವುದು ಮಸೂದೆಯ ಒಟ್ಟಾರೆ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಸೂದೆಯನ್ನು ಜು.8ರಂದು ಸದನದಲ್ಲಿ ಮಂಡಿಸಲಾಗಿತ್ತು.

ಗ್ರಾಹಕ ರಕ್ಷಣಾ ಕಾಯ್ದೆ, 1986ರ ಸ್ಥಾನದಲ್ಲಿ ಬರಲಿರುವ ಮಸೂದೆಯು ಗ್ರಾಹಕರ ದೂರುಗಳನ್ನು ಇತ್ಯರ್ಥಗೊಳಿಸಲು ಜಿಲ್ಲೆ,ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಗ್ರಾಹಕ ವಿವಾದಗಳ ಪರಿಹಾರ ಆಯೋಗ ಮತ್ತು ವೇದಿಕೆಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

ಗ್ರಾಹಕ ರಕ್ಷಣಾ ಮಸೂದೆ, 2018ನ್ನು ಜನವರಿ 2018ರಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದು,ಅದೇ ವರ್ಷದ ಡಿಸೆಂಬರ್‌ನಲ್ಲಿ ಅದು ಅಂಗೀಕಾರಗೊಂಡಿತ್ತು. ರಾಜ್ಯಸಭೆಯಲ್ಲಿ ಬಾಕಿಯಾಗಿದ್ದ ಮಸೂದೆಯು ಲೋಕಸಭೆಯು ವಿಸರ್ಜನೆಗೊಂಡ ಬಳಿಕ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಹೀಗಾಗಿ ಸರಕಾರವು ನೂತನ ಗ್ರಾಹಕ ರಕ್ಷಣಾ ಮಸೂದೆಯನ್ನು ತಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News