ಯುಪಿಸಿಎಲ್ ಗುತ್ತಿಗೆ ಆಧಾರಿತ ಕಾರ್ಮಿಕರ ಪ್ರತಿಭಟನೆ: ಸಮಸ್ಯೆ ಪರಿಹರಿಸಲು ಶನಿವಾರ ಸಭೆ

Update: 2019-07-30 17:16 GMT

ಪಡುಬಿದ್ರಿ: ಇಲ್ಲಿನ ಎಲ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಕಂಪನಿಯಲ್ಲಿ ಗುತ್ತಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ  ಸಂಸ್ಥೆಗಳ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆಯ ಹಿನ್ನಲೆಯಲ್ಲಿ ಶನಿವಾರ ಸಭೆ ಕರೆಯಲಾಗಿದೆ.

ಸಿಐಟಿಯು ಸಂಯೋಜಿತ ಯುಪಿಸಿಎಲ್ ಎಂಪ್ಲಾಯೀಸ್ ಯೂನಿಯನ್ ಸಂಘಟನೆ ನೇತೃತ್ವದಲ್ಲಿ ಕಂಪನಿಯ ಗೇಟ್ ಎದುರು ಸುಮಾರು 500 ಕ್ಕೂ ಅಧಿಕ ಕಾರ್ಮಿಕರು ಅರ್ಧ ಗಂಟೆಗಳ ಕಾಲ  ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಈ ವೇಳೆ ಕಂಪೆನಿ ಅಧಿಕಾರಿಗಳಾದ ಸಂಜಯ್ ಹರ್ಗಡೆ, ಶಶಿಧರ್, ನೀಲ ಕಂಠ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರ ನೇತೃತ್ವದಲ್ಲಿ ಸಮಸ್ಯೆ ಪರಿಹರಿಸುವ ಸಲುವಾಗಿ ಶನಿವಾರ ಕಾರ್ಮಿಕ ಮುಖಂಡರ ಸಭೆ ಕರೆಯಲಲಾಗಿದೆ  ನಡೆಸಲಾಗುವುದು ಎಂದು ಮನವಿ ಸ್ವೀಕರಿಸಿದ ಕಂಪೆನಿ ಪ್ರತಿನಿಧಿಗಳು ಭರವಸೆ ನೀಡಿದರು. 

ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ  ಮಾರ್ಚ್ 23 ಹಾಗೂ ಜುಲೈ 5ರಂದು ಕಂಪೆನಿಗೆ ಮನವಿ ಪತ್ರ ಸಲ್ಲಿಸಿದರೂ, ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 14ವರ್ಷಗಳಿಂದ ಗುತ್ತಿಗೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ  ಕಾರ್ಮಿಕರು ಸೂಕ್ತ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ವೇತನ, ಬೋನಸ್ ನೀಡದೆ ತಾರತಮ್ಯ ನೀತಿ ಅನುಸರಿಸಿ ವಂಚನೆ ಮಾಡಲಾಗುತ್ತಿದೆ. ಎಲ್ಲಾ ಕಾರ್ಮಿಕರಿಗೂ ಶೇ. 15ರಷ್ಟು ವಾರ್ಷಿಕ ವೇತನ ಹೆಚ್ಚಳ ಮಾಡಬೇಕು. ಹೆಚ್ಚುವರಿ ಕೆಲಸದ ಅವಧಿಯಲ್ಲಿ ಕರ್ತವ್ಯ ನಿರ್ವ ಹಿಸುವವರಿಗೆ ಹೆಚ್ಚುವರಿ ಭತ್ಯೆ ನೀಡಬೇಕು. ಸರಳ ಮೊಬೈಲ್ ಸೆಟ್ ಕಂಪೆನಿಯೊಳಗೆ ಬಳಕೆಗೆ ಅವಕಾಶ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಂಪೆನಿಯ ಒಳಗೆ ಅಜಾಗರೂಕತೆಯಿಂದ ಅವಘಡದಲ್ಲಿ ಸಂಕಷ್ಟ ಅನುಭವಿಸುವ ಕಾರ್ಮಿಕರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ಪರಿಹಾರ, ಯಾವುದೇ ಕಾರ್ಮಿಕ ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು. ರಾಜ್ಯ ಸರ್ಕಾರದ ಆದೇಶದಂತೆ ಎಲ್ಲಾ ಹುದ್ದೆಗಳಲ್ಲಿ ಸ್ಥಳೀಯರಿಗೆ ಮೊದಲ ಪ್ರಾಶಸ್ತ್ಯ ಕಲ್ಪಿಸಬೇಕು. ಪ್ರಸ್ತುತ ಕೆಲಸದಲ್ಲಿರುವ ಯಾವುದೇ ಗುತ್ತಿಗೆದಾರ ಪದನಾಮ ಹೊಂದಿರುವ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ವಜಾ ಮಾಡಬಾರದು. ಫ್ಯಾಕ್ಟರಿ ಕಾಯ್ದೆ ಪ್ರಕಾರ 200ಕ್ಕಿಂತ ಹೆಚ್ಚು ನೌಕರರಿದ್ದಲ್ಲಿ ಅವರಿಗೆ ಕ್ಯಾಂಟೀನ್‍ನಲ್ಲಿ ರಿಯಾಯಿತಿ ದರದಲ್ಲಿ ಗುಣಮಟ್ಟದ ಆಹಾರ ನೀಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ವಿಶ್ವಾಸ್, ವಿನಾಯಕ ಪ್ರಭು, ಸುಧಾಮ ಶೆಟ್ಟಿ, ನಿತಿನ್ ಕಾಂಚನ್, ಪ್ರತೀಕ್, ಸುನಿಲ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News