ಬಿಜೆಪಿ ನಾಯಕ ಮುಕುಲ್ ರಾಯ್ ವಿರುದ್ಧ ಬಂಧನ ಆದೇಶ ಜಾರಿ
ಕೋಲ್ಕತ್ತಾ, ಜು. 30: ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಮುಕುಲ್ ರಾಯ್‌ಗೆ ಕೋಲ್ಕತ್ತಾದಲ್ಲಿರುವ ನ್ಯಾಯಾಲಯ ಬಂಧನ ಆದೇಶ ಜಾರಿಗೊಳಿಸಿದೆ. ರಾಯ್ ಅವರನ್ನು ಆಗಸ್ಟ್ 29ರ ಒಳಗಡೆ ಬಂಧಿಸುವಂತೆ ಬುರ್ರಾಬಝಾರ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಆದೇ ದಿನದಂದು ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
2018 ಜುಲೈ 31ರಂದು ಹೌರಹ್ ಜಿಲ್ಲೆಯ ಶಿಬ್‌ಪುರದಲ್ಲಿರುವ ಕಲ್ಯಾಣ್ ರಾಯ್ ಬರ್ಮನ್ ನಿವಾಸದಿಂದ ಪೊಲೀಸರು 80 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದರು ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತರುಣ್ ಚಟ್ಟೋಪಾದ್ಯಾಯ ನ್ಯಾಯಾಲಯಕ್ಕೆ ತಿಳಿಸಿದರು.
80 ಲಕ್ಷ ರೂಪಾಯಿ ಇರಿಸಿರುವ ಉದ್ದೇಶದ ಬಗ್ಗೆ ವಿವರಣೆ ನೀಡಲು ವಿಫಲವಾದ ಬಳಿಕ ಬರ್ಮನ್ ವಿರುದ್ಧ ಬುರ್ರಾಬಝಾರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬರ್ಮನ್ ವಿಚಾರಣೆ ಸಂದರ್ಭ ರಾಯ್ ಅವರ ಹೆಸರು ಕೇಳಿ ಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು. ವಿಚಾರಣೆ ಹಾಜರಾಗುವಂತೆ ರಾಯ್‌ಗೆ ಸಮನ್ಸ್ ನೀಡಲಾಗಿತ್ತು. ಆದರೆ, ಅವರು ಹಾಜರಾಗಿರಲಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.