×
Ad

ರಾಜೀವ್ ಕುಮಾರ್ ನೂತನ ವಿತ್ತ ಕಾರ್ಯದರ್ಶಿ

Update: 2019-07-30 23:58 IST

ಹೊಸದಿಲ್ಲಿ, ಜು.30: ವಿತ್ತ ಸೇವೆಗಳ ಕಾರ್ಯದರ್ಶಿಯಾಗಿರುವ ರಾಜೀವ್ ಕುಮಾರ್ ಅವರನ್ನು ನೂತನ ವಿತ್ತ ಕಾರ್ಯದರ್ಶಿಯಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು ರಾಜೀವ್ ಕುಮಾರ್ ನೇಮಕಾತಿಗೆ ಅನುಮೋದನೆ ನೀಡಿದೆ.

 ಕುಮಾರ್ 1984ರ ಬ್ಯಾಚ್‌ನ ಜಾರ್ಖಂಡ್ ಪದವೃಂದದ ಅಧಿಕಾರಿಯಾಗಿದ್ದಾರೆ. ಸುಭಾಷ್‌ಚಂದ್ರ ಗರ್ಗ್‌ರನ್ನು ವಿದ್ಯುತ್ ಇಲಾಖೆಯ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಿದ ಹಿನ್ನೆಲೆಯಲ್ಲಿ ಕುಮಾರ್ ಅವರನ್ನು ನೂತನ ವಿತ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ವಿತ್ತ ಸಚಿವಾಲಯಕ್ಕೆ ಸೇರ್ಪಡೆಯಾಗುವ ಮೊದಲು ಕುಮಾರ್ ಸಿಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಎಸಿಸಿ (ಸಂಪುಟದ ನೇಮಕಾತಿ ಸಮಿತಿ) ನಡೆಸಿರುವ ಭಡ್ತಿ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಕೈಗೊಂಡ ಹಾಗೂ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ದಾಖಲೆ ಮೊತ್ತದ ಬಂಡವಾಳ ತುಂಬಿರುವ ಹೆಗ್ಗಳಿಕೆ ಕುಮಾರ್ ಅವರದ್ದಾಗಿದೆ. ಬ್ಯಾಂಕ್‌ನಲ್ಲಿ ಕೆಟ್ಟ ಸಾಲಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕುಮಾರ್ ಕೈಗೊಂಡಿರುವ ‘ಸ್ವಚ್ಛತಾ ಪ್ರಕ್ರಿಯೆ’ಯಿಂದಾಗಿ ಬ್ಯಾಂಕ್‌ಗಳು ಈ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಲಾಭ ದಾಖಲಿಸಲು ಆರಂಭಿಸಿವೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News