ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣ: ಉ. ಪ್ರದೇಶ ಸಚಿವನ ಅಳಿಯನ ಹೆಸರು ಎಫ್‍ಐಆರ್ ‍ನಲ್ಲಿ

Update: 2019-07-31 10:10 GMT
Photo: Hindustan Times

ಲಕ್ನೋ, ಜು.31: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಈ ಪ್ರಕರಣದಲ್ಲಿ ಹುಸೈನ್ ಗಂಜ್ ಶಾಸಕ ಹಾಗೂ ರಾಜ್ಯದ ಕೃಷಿ ಸಚಿವ ರಣ್ವೇಂದ್ರ ಪ್ರತಾಪ್ ಸಿಂಗ್ ಅವರ ಅಳಿಯ ಅರುಣ್ ಸಿಂಗ್ ಅವರ ಹೆಸರನ್ನು ಎಫ್‍ಐಆರ್ ‍ನಲ್ಲಿ ಉಲ್ಲೇಖಿಸಿದೆ.

ಅರುಣ್ ಸಿಂಗ್ ಉನ್ನಾವೋದ ನವಾಬ್‍ ಗಂಜ್ ಬ್ಲಾಕ್ ಪ್ರಮುಖ್ ಆಗಿದ್ದು  ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸೇಂಗರ್ ಸಮೀಪವರ್ತಿಯೆಂದು ತಿಳಿಯಲಾಗಿದೆ. ಅರುಣ್ ಸಿಂಗ್ ಹೊರತಾಗಿ ಕುಲದೀಪ್ ಸೇಂಗರ್ ನ ಸೋದರ, ನಿವೃತ್ತ ಸೇನಾ ಜವಾನ, ಒಬ್ಬ ವಕೀಲ ಹಾಗೂ ಗುತ್ತಿಗೆದಾರನ ಹೆಸರು ಕೂಡ ಎಫ್‍ಐಆರ್ ನಲ್ಲಿ ಉಲ್ಲೇಖಗೊಂಡಿದೆ.

ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣ ಕುರಿತಂತೆ ಸಿಬಿಐ ಈಗಾಗಲೇ ಉಚ್ಛಾಟಿತ ಬಿಜೆಪಿ ಶಾಸಕ ಸೇಂಗಾರ್ ಹಾಗೂ ಹತ್ತು ಮಂದಿ ಇತರರ ವಿರುದ್ಧ ಪ್ರಕರಣ ದಾಖಲಿಸಿದೆ. ಇಪ್ಪತ್ತು ಮಂದಿ ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧವೂ ಕ್ರಿಮಿನಲ್ ಸಂಚು, ಕೊಲೆ, ಕೊಲೆಯತ್ನ ಹಾಗೂ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇಬ್ಬರು ಸಂಬಂಧಿಗಳು ಸಾವಿಗೀಡಾಗಿ ಸಂತ್ರಸ್ತೆ ಮತ್ತಾಕೆಯ ವಕೀಲ ಗಂಭೀರ ಗಾಯಗೊಂಡ ಅಪಘಾತ ಪ್ರಕರಣದ ತನಿಖೆ ನಡೆಸಲಿರುವ ಸಿಬಿಐ ಈಗಾಗಲೇ ಪ್ರಕರಣದ ಕುರಿತಾದ ದಾಖಲೆಗಳನ್ನು ಪೊಲೀಸರಿಂದ ಸಂಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News