×
Ad

ಉನ್ನಾವೊ ಪ್ರಕರಣ: ಲೋಕಸಭೆಯಲ್ಲಿ ಕಾಂಗ್ರೆಸ್,ಇತರ ಪ್ರತಿಪಕ್ಷಗಳಿಂದ ಸಭಾತ್ಯಾಗ

Update: 2019-07-31 20:44 IST

ಹೊಸದಿಲ್ಲಿ, ಜು.31: ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಕಾರು ಅಪಘಾತ ಪ್ರಕರಣವನ್ನು ಬುಧವಾರ ಲೋಕಸಭೆ ಯಲ್ಲಿ ಪ್ರಸ್ತಾಪಿಸಿದ ಪ್ರತಿಪಕ್ಷಗಳು, ಈ ವಿಷಯದಲ್ಲಿ ಸರಕಾರದಿಂದ ಉತ್ತರಕ್ಕೆ ಆಗ್ರಹಿಸಿ ಸಭಾತ್ಯಾಗ ನಡೆಸಿದವು.

ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಜೀವ ಬೆದರಿಕೆಗಳನ್ನು ಪ್ರತಿಭಟಿಸಿ ಕಾಂಗ್ರೆಸ್,ಡಿಎಂಕೆ, ಎನ್‌ಸಿಪಿ, ಆರ್‌ಎಸ್‌ಪಿ ಮತ್ತು ಐಯುಎಂಎಲ್ ಸದಸ್ಯರು ಸದನದಿಂದ ಹೊರನಡೆದರು.

ಇದಕ್ಕೂ ಮುನ್ನ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಆಧಿರ ರಂಜನ ಚೌಧುರಿ ಅವರು,ಪ್ರತಿಪಕ್ಷವು ಈ ವಿಷಯವನ್ನು ಪದೇ ಪದೇ ಎತ್ತುತ್ತಿದ್ದರೂ ಗೃಹಸಚಿವ ಅಮಿತ್ ಶಾ ಅವರು ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯುತ್ತಿದೆಯಾದರೂ ತಮಗೆ ಜೀವ ಬೆದರಿಕೆಯಿದೆ ಎಂದು ಸಂತ್ರಸ್ತೆಯ ಕುಟುಂಬ ಸದಸ್ಯರು ಹೇಳುತ್ತಿದ್ದಾರೆ ಎಂದರು.

ಸಭಾತ್ಯಾಗ ನಡೆಸಿದ ಸದಸ್ಯರು ಸದನಕ್ಕೆ ಮರಳಿದ ಬಳಿಕ ಮತ್ತೆ ಉನ್ನಾವೊ ವಿಷಯವನ್ನು ಪ್ರಸ್ತಾಪಿಸಲು ಚೌಧುರಿ ಬಯಸಿದಾಗ ಅವಕಾಶವನ್ನು ನಿರಾಕರಿಸಿದ ಸ್ಪೀಕರ್ ಓಂ ಬಿರ್ಲಾ ಅವರು,ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಸದನದಲ್ಲಿ ಎತ್ತಬಾರದೆಂದು ಸದಸ್ಯರಲ್ಲಿ ನಿರ್ಧಾರವಾಗಿದೆ. ಸದಸ್ಯರು ಈ ನಿರ್ಧಾರವನ್ನು ಬದಲಿಸಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನೆತ್ತಲು ಬಯಸಿದರೆ ತನಗೇನೂ ಸಮಸ್ಯೆಯಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News