×
Ad

ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳ ನಿಯಂತ್ರಣಕ್ಕೆ ಕಾನೂನು: ಪರಿಶೀಲಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸಲಹೆ

Update: 2019-07-31 23:24 IST

ಹೊಸದಿಲ್ಲಿ, ಜು.31: ಮಹಿಳಾ ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಯನ್ನು ನಿಯಂತ್ರಿಸಲು ಕಾನೂನು ಜಾರಿಗೊಳಿಸುವ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

ನಿಪುಣ್ ಸಕ್ಸೇನಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ, ಆ್ಯಪ್ ಆಧಾರಿತ ಸೇವೆಯನ್ನು ನಿಯಂತ್ರಿಸುವ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಪ್ರತಿನಿಧಿಯನ್ನು ನೇಮಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ವಿಚಾರಣೆ ಸಂದರ್ಭ ಮಹಿಳೆಯರ ಸುರಕ್ಷತೆಗಾಗಿ ‘ವನ್ ಸ್ಟಾಪ್ ಕ್ರೈಸಿಸ್ ಸೆಂಟರ್’ಗಳನ್ನು ಆರಂಭಿಸುವ ವಿಷಯವೂ ಚರ್ಚೆಗೆ ಬಂದಿತು. ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲು ಪ್ರತೀ ಜಿಲ್ಲೆಯಲ್ಲೂ ಇಂತಹ ಕೇಂದ್ರಗಳನ್ನು ಆರಂಭಿಸುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳಿಗೆ ಸೂಚಿಸಿತು.

ಈ ಕೇಂದ್ರಗಳನ್ನು ನಡೆಸುವಾಗ ಕೇಂದ್ರ ಸರಕಾರ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ ಮತ್ತು ಮಾರ್ಗದರ್ಶಿ ಸೂತ್ರವನ್ನು ಪಾಲಿಸುವಂತೆ ಸೂಚಿಸಿತು. ಕ್ಯಾಬ್ ಸೇವೆಗಳು ಮೋಟಾರು ವಾಹನ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಬರುವುದಿಲ್ಲ. ಆದ್ದರಿಂದ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ನಿಯಂತ್ರಿಸುವ ಕೋರಿಕೆ ಸಮಂಜಸವಾಗಿದೆ ಎಂದು ಅರ್ಜಿದಾರರ ಪ್ರತಿನಿಧಿಯಾಗಿದ್ದ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News