×
Ad

ಜಮೀನು ರಕ್ಷಿಸುವ ಹೋರಾಟದಲ್ಲಿ ಹತ್ಯೆಯಾದವರ ಜಾಗತಿಕ ಪಟ್ಟಿ: ಭಾರತಕ್ಕೆ ತೃತೀಯ ಸ್ಥಾನ

Update: 2019-07-31 23:29 IST

ಹೊಸದಿಲ್ಲಿ, ಜು.31: ತಮ್ಮ ಜಮೀನು ಮತ್ತು ಪರಿಸರವನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಕಳೆದ ವರ್ಷ ಭಾರತದಲ್ಲಿ 23 ಮಂದಿ ಪ್ರಾಣ ತೆತ್ತಿದ್ದು, ಜಾಗತಿಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಮಾನವ ಹಕ್ಕುಗಳ ಪರ ಹೋರಾಡುವ ಸಂಸ್ಥೆ ‘ಗ್ಲೋಬಲ್ ವಿಟ್ನೆಸ್’ನ ವರದಿಯಲ್ಲಿ ತಿಳಿಸಲಾಗಿದೆ.

 2018ರಲ್ಲಿ ತಮ್ಮ ಮನೆ, ಅರಣ್ಯ, ನದಿ, ಜಮೀನುಗಳನ್ನು ವಿನಾಶಕಾರಿ ಉದ್ದಿಮೆಗಳಿಂದ ರಕ್ಷಿಸಿಕೊಳ್ಳುವ ಹೋರಾಟದಲ್ಲಿ ವಿಶ್ವದಾದ್ಯಂತ 164 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 23 ಮಂದಿ ಸಾವನ್ನಪ್ಪಿದ್ದರೆ, ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿರುವ ಫಿಲಿಪ್ಪೀನ್ಸ್‌ನಲ್ಲಿ 30, ಎರಡನೇ ಸ್ಥಾನದಲ್ಲಿರುವ ಕೊಲಂಬಿಯಾದಲ್ಲಿ 24 ಸಾವು ಸಂಭವಿಸಿದೆ. ತಮಿಳುನಾಡಿನಲ್ಲಿ 2018ರ ಮೇ ತಿಂಗಳಿನಲ್ಲಿ ವೇದಾಂತ ತಾಮ್ರ ಘಟಕದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 13 ಮಂದಿಯ ಹತ್ಯೆಯಾಗಿರುವುದನ್ನು ‘ಎನಿಮೀಸ್ ಆಫ್ ದಿ ಸ್ಟೇಟ್‌‘ ಎಂಬ ಶಿರೋನಾಮೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. 19 ರಾಷ್ಟ್ರಗಳಲ್ಲಿ ತಲಾ 1 ಸಾವಿನ ಪ್ರಕರಣ ನಡೆದಿದೆ. ಬ್ರೆಝಿಲ್‌ನಲ್ಲಿ 20 ಸಾವು ಸಂಭವಿಸಿದ್ದು 4ನೇ ಸ್ಥಾನದಲ್ಲಿದ್ದರೆ, ಗ್ವಾಟೆಮಾಲ (16) ಮತ್ತು ಮೆಕ್ಸಿಕೊ(14) ನಂತರದ ಸ್ಥಾನದಲ್ಲಿವೆ. ವಿಶ್ವದಲ್ಲಿ ಸಂಭವಿಸಿದ ಒಟ್ಟು ಹತ್ಯೆಯಲ್ಲಿ ಶೇ. 50ಕ್ಕೂ ಹೆಚ್ಚು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ದಾಖಲಾಗಿವೆ.

  

ಜಾಗತಿಕವಾಗಿ ಅತೀ ಹೆಚ್ಚಿನ ಪ್ರಮಾಣದ ಹತ್ಯೆ ಸಂಭವಿಸಿದ್ದು ಗಣಿ ಉದ್ದಿಮೆಯಿಂದ ಜಮೀನನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ (43). ಕೃಷಿ ಉದ್ಯಮ ವಲಯಕ್ಕೆ ಸಂಬಂಧಿಸಿ 21, ನೀರು ಮತ್ತು ಅಣೆಕಟ್ಟಿಗೆ ಸಂಬಂಧಿಸಿ 17 ಹತ್ಯೆ ಸಂಭವಿಸಿದೆ. ಮೃತಪಟ್ಟವರೆಲ್ಲಾ ತಮ್ಮ ಮನೆ, ಜೀವನಾಧಾರಗಳನ್ನು ರಕ್ಷಿಸಿಕೊಳ್ಳಲು, ಪರಿಸರ ಸಂರಕ್ಷಣೆಗೆ ನಡೆಸಿದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಜನಸಾಮಾನ್ಯರು. ಬಹುತೇಕ ಸಂದರ್ಭದಲ್ಲಿ ಇವರ ಜಮೀನನ್ನು ಬಲಾತ್ಕಾರವಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಮತ್ತು ಇವರು ವಿರೋಧಿಸಿ ಹೋರಾಟ ನಡೆಸಿದ್ದಾರೆ. ವಿಶ್ವದಾದ್ಯಂತ ಸರಕಾರಗಳು, ನ್ಯಾಯಾಂಗ ವ್ಯವಸ್ಥೆಯ ಮೂಲಕ ಜನಸಾಮಾನ್ಯರ ಮೇಲೆ ಒತ್ತಡ ಹೇರಿ ಅಥವಾ ಬಲಪ್ರಯೋಗದಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತದೆ ಎಂದು ವರದಿ ತಿಳಿಸಿದೆ. ಕೆಲವು ರಾಷ್ಟ್ರಗಳಲ್ಲಿ ಪತ್ರಿಕಾ ಸ್ವಾತಂತ್ರಕ್ಕೆ ಕಡಿವಾಣಇರುವ ಕಾರಣ ಜಮೀನು ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಹೋರಾಟ ನಡೆಸುವವರ ಸ್ಥಿತಿಯನ್ನು ಅಂದಾಜಿಸುವುದು ಕಷ್ಟವಾಗಿದೆ. ಅಲ್ಲದೆ ಸರಕಾರ ಹಾಗೂ ಎನ್‌ಜಿಒ ಸಂಸ್ಥೆಗಳು ಇಂತಹ ಘಟನೆಗಳ ಮೇಲೆ ವ್ಯವಸ್ಥಿತವಾಗಿ ನಿಗಾ ಇರಿಸಿಲ್ಲ ಎಂದು ವರದಿ ತಿಳಿಸಿದೆ.

ಭೂಮಿ ಮತ್ತು ಪರಿಸರ ಸಂರಕ್ಷಣೆಯ ಹೋರಾಟಗಾರರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ತಡೆಯಲು ಸರಕಾರಗಳು, ಸಂಸ್ಥೆಗಳು ಹಾಗೂ ಹೂಡಿಕೆದಾರರು ಕ್ರಮ ಕೈಗೊಂಡರೆ ಮಾತ್ರ ಇಂತಹ ಹೋರಾಟ ಪರಿಣಾಮಕಾರಿಯಾಗಿ ಮುಂದುವರಿಯಲು ಸಾಧ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News