ಅತ್ಯಾಚಾರ ಪ್ರಕರಣ: ಪಿತೃತ್ವ ಪರೀಕ್ಷೆಗೆ ಒಳಗಾದ ಕೋಡಿಯೇರಿ ಬಾಲಕೃಷ್ಣನ್ ಪುತ್ರ
ತಿರುವನಂತಪುರ, ಜು. 31: ಮುಂಬೈ ಮಹಿಳೆಯೋರ್ವರು ದಾಖಲಿಸಿದ ಅತ್ಯಾಚಾರ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಸಿಪಿಎಂ ನಾಯಕ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ಕೋಡಿಯೇರಿ ಡಿಎನ್‌ಎ ಪರೀಕ್ಷೆಗೆ ಒಳಗಾಗಿದ್ದಾರೆ.
ಡಿಎನ್‌ಎ ಪರೀಕ್ಷೆಗೆ ಒಳಗಾಗುವಂತೆ ಬಾಂಬೆ ಉಚ್ಚ ನ್ಯಾಯಾಲಯ ಬಿನೋಯ್ ಬಾಲಕೃಷ್ಣನ್‌ಗೆ ಆದೇಶಿಸಿತ್ತು. ಬಿನೋಯ್ ಬಾಲಕೃಷ್ಣನ್ ರಕ್ತದ ಮಾದರಿಯನ್ನು ಮಂಗಳವಾರ ಪೊಲೀಸರಿಗೆ ಹಸ್ತಾಂತರಿಸಿದ್ದರು. ರಕ್ತದ ಮಾದರಿಯ ಪರೀಕ್ಷೆಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ಆಗಸ್ಟ್ 26ರಂದು ನಡೆಯಲಿದೆ.
ವಿವಾಹವಾಗುವುದಾಗಿ ಭರವಸೆ ನೀಡಿದ ಬಳಿಕ ಬಿನೋಯ್ ಬಾಲಕೃಷ್ಣನ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಾಂಬೈಯ 33 ವರ್ಷದ ಮಹಿಳೆ ಆರೋಪಿಸಿದ್ದಾರೆ. ಅವರು ತನ್ನ 9 ವರ್ಷದ ಬಾಲಕನ ತಂದೆ ಎಂದು ಕೂಡ ಹೇಳಿದ್ದಾರೆ. ಮುಂಬೈಯಲ್ಲಿ 2009ರಲ್ಲಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ತಾನು ಬಿನೋಯ್ ಬಾಲಕೃಷ್ಣನ್ ಅವರನ್ನು ಭೇಟಿಯಾದೆ ಎಂದು ಅವರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಬಿನೋಯ್ ಬಾಲಕೃಷ್ಣನ್ ಹಣ ಠೇವಣಿ ಮಾಡುವ ಬ್ಯಾಂಕ್ ಖಾತೆಯ ವಿವರಗಳನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ.
ತನ್ನ ವಿರುದ್ಧ ದಾಖಲಿಸಿರುವ ದೂರನ್ನು ರದ್ದುಗೊಳಿಸುವಂತೆ ಕೋರಿ ಬಿನೋಯ್ ಬಾಲಕೃಷ್ಣನ್ ಜೂನ್ 13ರಂದು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಜುಲೈ 3ರಂದು ಸತ್ರ ನ್ಯಾಯಾಲಯ ಜಾಮೀನು ನೀಡಿತ್ತು ಹಾಗೂ ಪಿತೃತ್ವದ ಪರೀಕ್ಷೆಗ ರಕ್ತದ ಮಾದರಿ ನೀಡುವಂತೆ ಆದೇಶಿಸಿತ್ತು.