ಚತ್ತೀಸ್‌ಗಢ: ಐಇಡಿ ಸ್ಫೋಟ; ಸಿಆರ್‌ಪಿಎಫ್ ಯೋಧ ಹುತಾತ್ಮ

Update: 2019-07-31 18:05 GMT
ಸಾಂದರ್ಭಿಕ ಚಿತ್ರ

ರಾಯ್‌ಪುರ, ಜು. 31: ಚತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ನಕ್ಸಲೀಯರು ಇರಿಸಿದ್ದ ಐಇಡಿ ಬುಧವಾರ ಸ್ಫೋಟಗೊಂಡ ಪರಿಣಾಮ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಸಿಆರ್‌ಪಿಎಫ್‌ನ ತಂಡವೊಂದು ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿ ಹಿಂದಿರುಗುತ್ತಿದ್ದಾಗ ಬಸ್ತಾರ್‌ನ ಪುಷ್ಪಾಲ್‌ನಲ್ಲಿ ಇರುವ ಸಿಆರ್‌ಪಿಎಫ್‌ನ 195ನೇ ಕ್ಯಾಂಪ್ ಬಳಿ ಬೆಳಗ್ಗೆ 6 ಗಂಟೆಗೆ ಈ ಸ್ಫೋಟ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಸ್ತಾರ್ ಹಾಗೂ ದಂತೆವಾಡ ಜಿಲ್ಲೆಗಳ ಗಡಿಯ ಅರಣ್ಯ ಪ್ರದೇಶದಲ್ಲಿ ಸಿಆರ್‌ಪಿಎಫ್ ಮಂಗಳವಾರ ರಾತ್ರಿ ಶೋಧ ಕಾರ್ಯಾಚರಣೆ ಆರಂಭಿಸಿತ್ತು ಎಂದು ಅವರು ತಿಳಿಸಿದ್ದಾರೆ. ಸ್ಫೋಟದಲ್ಲಿ ಬಿಹಾರ್‌ದ ನಲಂದಾ ಜಿಲ್ಲೆಯ ನಿವಾಸಿ, ಯೋಧ ರುಶಾನ್ ಕುಮಾರ್ (23) ಹುತಾತ್ಮರಾಗಿದ್ದಾರೆ. ಬೋದ್ಲಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ನಿವೇಶನದಲ್ಲಿ ಸಿಆರ್‌ಪಿಎಫ್‌ನ ತಂಡ ಸಾಗುತ್ತಿದ್ದಾಗ ರುಶಾನ್ ಕುಮಾರ್ ಆಕಸ್ಮಿಕವಾಗಿ ಐಇಡಿ ಮೇಲೆ ಕಾಲಿರಿಸಿದ್ದರು. ಅದು ಸ್ಫೋಟಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ.

ರುಶಾನ್ ಕುಮಾರ್ ಅವರ ಮೃತದೇಹವನ್ನು ಪುಷ್ಪಾಲ್ ಶಿಬಿರಕ್ಕೆ ಕೊಂಡೊಯ್ಯಲಾಯಿತು ಅನಂತರ ದಾಂತೆವಾಡದ ಬರ್ಸೂರ್‌ನಲ್ಲಿರುವ ಬೆಟಾಲಿಯನ್‌ನ ಕೇಂದ್ರ ಕಚೇರಿಗೆ ವರ್ಗಾಯಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News