ಸೊಳ್ಳೆ ಲಾರ್ವಾ ಬೇಟೆಗೀಗ ಶಾಸಕರ ಸಾಥ್ : ಬೂತ್ ಮಟ್ಟದಲ್ಲಿ ತಂಡ ರಚಿಸಿ ಜಾಗೃತಿಗೆ ಕ್ರಮ

Update: 2019-08-01 11:08 GMT

ಮಂಗಳೂರು, ಆ.1: ಡೆಂಗ್ ನಿಯಂತ್ರಣಕ್ಕೆ ಸಂಬಂಧಿಸಿ ಲಾರ್ವಾ ಬೇಟೆಗೆ ಒತ್ತು ನೀಡಿರುವ ದ.ಕ. ಜಿಲ್ಲಾಡಳಿತಕ್ಕೆ ಇದೀಗ ಮಂಗಳೂರು ನಗರ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳ ಶಾಸಕರು ಸಾಥ್ ನೀಡಲು ಮುಂದಾಗಿದ್ದಾರೆ. ಬೂತ್ ಮಟ್ಟದಲ್ಲಿ ಯುವಕರ ತಂಡ ರಚಿಸಿ ಲಾರ್ವಾದ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿ ಜನಸಾಮಾನ್ಯರಿಗೆ ಲಾರ್ವಾ ನಾಶ ಪಡಿಸುವ ಬಗ್ಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ನಿರ್ಧರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ದ.ಕ. ಜಿಲ್ಲೆಯಲ್ಲಿ ಪ್ರಮುಖವಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ತೀವ್ರವಾಗಿ ಬಾಧಿಸಿರುವ ಡೆಂಗ್ ಸಮಸ್ಯೆಗೆ ಕಾರಣವಾದ ಲಾರ್ವಾ ನಾಶಕ್ಕೆ ಒತ್ತು ನೀಡಲಾಗಿರುವ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಶಾಸಕರಿಗೆ ಮಾಹಿತಿ ಒದಗಿಸಲಾಗಿತು.

ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಖ್ಯಾದ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸೇರಿದಂತೆ, ವೈದ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರು ಲಾರ್ವಾ ನಾಶದ ಕುರಿತಂತೆ ಈಗಾಗಲೇ ಸಾಕಷ್ಟು ರೀತಿಯಲ್ಲಿ ಜನಸಾಮಾನ್ಯರಿಗೆ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಶಾಸಕರ ನೇತೃತ್ವದಲ್ಲಿ ಬೂತ್ ಹಾಗೂ ವಾರ್ಡ್ ಮಟ್ಟದಲ್ಲಿ ತಂಡಗಳನ್ನು ರಚಿಸಿ ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತಿ ಮೂಡಿಸಿದರೆ ಮತ್ತಷ್ಟು ಪರಿಣಾಮಕಾರಿಯಾಗಿ ಡೆಂಗ್ ಲಾರ್ವಾ ನಾಶ ಮಾಡಲು ಸಾಧ್ಯ ಎಂದು ಮನವರಿಕೆ ಮಾಡಲಾಯಿತು.

ಇದಕ್ಕೆ ಸ್ಪಂದಿಸಿದ ಶಾಸಕರು, ಎರಡು ದಿನಗಳೊಳಗೆ ಬೂತ್ ಹಾಗೂ ವಾರ್ಡ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸೇರಿಸಿಕೊಂಡು ಜಿಲ್ಲಾಡಳಿತ ಹಾಗೂ ಮಹಾಗನರಹ ಪಾಲಿಕೆ ತಜ್ಞರಿಂದ ಅವರಿಗೆ ತರಬೇತಿಯನ್ನು ಒದಗಿಸಿ ರವಿವಾರದಿಂದಲೇ ಅವರು ಬೂತ್ ಮಟ್ಟದಲ್ಲಿ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸುವಂತಾಗಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಡೆಂಗ್ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತ ಜುಲೈ 18ರಿಂದಲೇ ನಗರದಲ್ಲಿ ಲಾರ್ವಾ ಉತ್ಪತ್ತಿ ತಾಣಗಳೆಂದು ಗುರುತಿಸಲಾಗಿರುವ ಪ್ರದೇಶಗಳನ್ನು 120 ಗ್ರಿಡ್‌ಗಳನ್ನಾಗಿಸಿ ಈಗಾಗಲೇ 58 ಗ್ರಿಡ್‌ಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಹಾಗೂ ಲಾರ್ವಾ ನಾಶ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸಭೆಯಲ್ಲಿ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನಪಾ, ರೆಡ್‌ಕ್ರಾಸ್ ಹಾಗೂ ಸರಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈಗಾಗಲೇ 30493 ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಂದರ್ಭ 3500 ಮನೆಗಳಲ್ಲಿ ಲಾರ್ವಾ ಉತ್ಪತ್ತಿ ಪತ್ತೆಯಾಗಿದ್ದು, ನಾಶ ಪಡಿಸಲಾಗಿದೆ. ಈ ಕಾರ್ಯಾಚರಣೆ ದೀರ್ಘಕಾಲೀನವಾಗಿ ಮುಂದುವರಿಯಲಿದೆ. ಇದೇ ವೇಳೆ ಶಿಕ್ಷಣ ಸಂಸ್ಥೆಗಳಿಗೂ ಲಾರ್ವಾ ನಾಶಕ್ಕೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದ್ದು, ಪರಿಶೀಲನೆ ಕಾರ್ಯ ನಡೆಸಿ ಮುಂಜಾಗೃತಾ ಕ್ರಮವಾಗಿ ಲಾರ್ವಾ ನಾಶ ಮಾಡಲು ವಿಫಲವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ದಂಡ ವಿಧಿಸುವ ಮೂಲಕ ಜಾಗೃತಿ ಮೂಡಿಸಲಾಗುವುದು.

ಖಾಸಗಿ ಕಚೇರಿಗಳು ಕೆಲಸ ಸ್ಥಳಗಳಲ್ಲಿಯೂ ಲಾರ್ವಾ ನಾಶಕ್ಕೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಡೆಂಗ್‌ಗೆ ಸಂಬಂಧಿಸಿ 581 ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಅವರಲ್ಲಿ 380 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ 170ರಷ್ಟು ಡೆಂಗ್ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವಾರದಿಂದ ಪ್ರತಿ ರೋಗಿಯ ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆದು ರೋಗಿಯ ಜತೆ ನಿರಂತರ ಸಂಪರ್ಕವಿರಿಸಿ ಯೋಗಕ್ಷೇಮ ವಿಚಾರಿಸಲಾಗುತ್ತಿದೆ. ರೋಗಿಯ ಮನೆಗೆ ಭೇಟಿ ನೀಡಿ ಮಾಹಿತಿ ಹಾಗೂ ಪರಿಶೀಲನೆ ನಡೆಸುವ ಕಾರ್ಯವನ್ನೂ ಜತೆಯಾಗಿ ಮಾಡಲಾಗುತ್ತಿದೆ.

ಸಭೆಯಲ್ಲಿ ಡಿಎಚ್‌ಒ ಡಾ. ರಾಮಕೃಷ್ಣ ರಾವ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ವೆನ್‌ಲಾಕ್ ಆಸ್ಪತ್ರೆ ಡಿಎಂಒ ಡಾ. ರಾಜೇಶ್ವರಿ ದೇವಿ, ಮನಪಾ ಉಪ ಆಯುಕ್ತೆ ಗಾಯತ್ರಿ ನಾಯಕ್, ಎಸಿ ರವಿಚಂದ್ರ ನಾಯಕ್, ಲಾವಾ ನಾಶಕ್ಕೆ ಸಂಬಂಧಿಸಿ ಮನಪಾ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿರು ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ಮನಪಾಕ್ಕೆ ವಿಶೇಷ ವೈದ್ಯಾಧಿಕಾರಿ ನೇಮಕ ಅಗತ್ಯ

ಡೆಂಗ್ ಮಲೇರಿಯಾವು ಮನಪಾ ವ್ಯಾಪ್ತಿಯಲ್ಲೇ ಹೆಚ್ಚು ವ್ಯಾಪಿಸಿರುವುದರಿಂದ ವಿಶೇಷ ವೈದ್ಯಾಧಿಕಾರಿ ನೇಮಕ ಮಾಡಿ ಮೇಲ್ವಿಚಾರಣೆ ಮಾಡುವುದು ಅಗತ್ಯ. ಜತೆಯಲ್ಲಿ ವಾರ್ಡ್ ಕಮಿಟಿ ರೂಪದಲ್ಲಿ ಸಮಿತಿ ರಚನೆ ಮಾಡಿ ಅವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಶಾಸಕರು ಮುತುವರ್ಜಿ ವಹಿಸಬೇಕು.
ಡಾ. ಶ್ರೀನಿವಾಸ ಕಕ್ಕಿಲಾಯ, ಖ್ಯಾತ ವೈದ್ಯರು, ಮಂಗಳೂರು.

ಬೂತ್‌ಗೆ ಇಬ್ಬರಂತೆ ವಾರ್ಡ್ ಮಟ್ಟದಲ್ಲಿ 10 ಮಂದಿಯ ತಂಡವನ್ನು ರಚಿಸಿ ಮನೆ ಮನೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುವುದು.

- ಡಾ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ.

ನಿನ್ನೆ ಡೆಂಗ್‌ನಿಂದ ಸಾವಿಗೀಡಾದವರೊಬ್ಬರ ಮನೆಗೆ ಭೇಟಿ ನೀಡಿದಾಗ ಮನೆಯ ಹೊರಗಡೆ ಗೋಣಿ ಚೀಲದಲ್ಲಿ ಎಳನೀರು (ಬೊಂಡ) ಚಿಪ್ಪು ರಾಶಿ ಹಾಕಲಾಗಿತ್ತು. ಡೆಂಗ್ ಹರಡುವ ಸೊಳ್ಳೆಗಳು ಇಂತಹ ಸ್ವಚ್ಛವಾದ ಮನೆಯ ಒಳಗೆ ಹಾಗೂ ಹೊರಗೆ ನಿಂತ ಸ್ವಚ್ಛ ನೀರಿನಲ್ಲೇ ಉತ್ಪತ್ತಿಯಾಗುತ್ತವೆ ಎಂಬ ಮಾಹಿತಿ ಇನ್ನೂ ಜನಸಾಮಾನ್ಯರಿಗೆ ಅರಿವಿಲ್ಲ. ಈ ಬಗ್ಗೆ ಬೂತ್ ಮಟ್ಟದಲ್ಲಿ ತಂಡ ರಚಿಸಿ ತಕ್ಷಣದಿಂದೇ ಕ್ರಮ ಕೈಗೊಳ್ಳಲಾಗುವುದು.
ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News