ಸುರತ್ಕಲ್: ಬಿರುಸುಗೊಂಡ ಕಡಲ್ಕೊರೆತ

Update: 2019-08-01 11:13 GMT

ಸುರತ್ಕಲ್: ಸಮೀಪದ ಚಿತ್ರಾಪುರ ಕುಳಾಯಿ ಪ್ರದೇಶದಲ್ಲಿ ಕಡಲ್ಕೊರೆತ ಬಿರುಸುಗೊಂಡಿದ್ದು ಚಿತ್ರಾಪುರ ರಸ್ತೆ ಸಮುದ್ರ ಪಾಲಾಗುವ ಭೀತಿ ತಲೆದೋರಿದೆ. ಸಮುದ್ರ ತೀರದಲ್ಲಿ ಒಂದು ಮನೆಯೂ ಅಪಾಯದಂಚಿನಲ್ಲಿದೆ. ಮುಕ್ಕ ಬಳಿಯೂ ಕಡಲ್ಕೊರೆತ ತೀವ್ರಗೊಂಡಿದೆ.

ಚಿತ್ರಾಪುರದಲ್ಲಿ ರಸ್ತೆ ಸಮೀಪದಲ್ಲಿರುವ ವಿದ್ಯುತ್ ಕಂಬಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೆಸ್ಕಾಂ ವಿದ್ಯುತ್ ನಿಲುಗಡೆ ಗೊಳಿಸಿದೆ. ಮೀನುಗಾರಿಕಾ ರಸ್ತೆ ಪಣಂಬೂರಿನಿಂದ ಸುರತ್ಕಲ್ ಮುಕ್ಕದವರೆಗೂ ಇದ್ದು ಹಲವೆಡೆ ಕಲ್ಲುಗಳನ್ನು ತಡೆಗೋಡೆಯಾಗಿ ಬಳಸಲಾಗಿದೆ. ಇನ್ನು ಉಳಿದೆಡೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ತುರ್ತು ಕ್ರಮದ ಭಾಗವಾಗಿ ಮರಳು ಚೀಲವನ್ನು ತಡೆಯಾಗಿ ಬಳಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ಡಾ.ಭರತ್ ಶೆಟ್ಟಿ  ಗುರುವಾರ ಚಿತ್ರಾಪುರಕ್ಕೆ ಭೇಟಿ ನೀಡಿದರಲ್ಲದೆ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿ ತ್ವರಿತವಾಗಿ ಮರಳು ಚೀಲ ಹಾಕುವಂತೆ ಸೂಚಿಸಿದರು. ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅಪಾಯದಲ್ಲಿರುವ ಮನೆ ರಕ್ಷಣೆಗೆ ಆದ್ಯತೆ ನೀಡಲಾಗುತ್ತದೆ. ಅನಿವಾರ್ಯವಾದಲ್ಲಿ ಮನೆ ನಿವಾಸಿಗಳನ್ನು ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದರು.

ಡೆಂಗ್ ವಿರುದ್ಧ ಈಗಾಗಲೇ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಡೆಸುತ್ತಿದೆ. ಬೆಂಗಳೂರಿನಲ್ಲಿದ್ದರೂ ನಿರಂತರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮದ ಬಗ್ಗೆ ಮಾಹಿತಿ ಪಡೆಯುತ್ತಿದೆ. ಡೆಂಗ್ ಡೇ ಡ್ರೈವ್ ಮೂಲಕ ಜನರಿಗೆ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ. ಜನರೂ ತಮ್ಮ ಮನೆಗಳ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು. ನೀರು ನಿಲ್ಲದಂತೆ ಕ್ರಮ ಕೈಗೊಳ್ಳ ಬೇಕು ಎಂದು ಮನವಿ ಮಾಡಿದರು.

ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಸಾಮಾಜಿಕ ಜಾಲತಾಣದ ಕಿರಣ್ ಕುಮಾರ್ ಕೋಡಿಕಲ್, ಭರತ್ರಾಜ್ ಕೃಷ್ಣಾಪುರ, ಕಂದಾಯ ಅಧಿಕಾರಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News