×
Ad

ಚೀನಾ: ಹಲಾಲ್ ರೆಸ್ಟೋರೆಂಟ್‌ಗಳಿಂದ ಅರೇಬಿಕ್ ಸಂಕೇತ, ಬರಹ ತೆಗೆಯಲು ಸೂಚನೆ

Update: 2019-08-01 19:55 IST

ಬೀಜಿಂಗ್, ಆ. 1: ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಅರೇಬಿಕ್ ಬರಹಗಳು ಮತ್ತು ಸಂಕೇತಗಳನ್ನು ಹಲಾಲ್ ರೆಸ್ಟೋರೆಂಟ್‌ಗಳು ಮತ್ತು ಆಹಾರ ಅಂಗಡಿಗಳಿಂದ ತೆಗೆಸುವಂತೆ ಚೀನಾ ರಾಜಧಾನಿ ಬೀಜಿಂಗ್‌ನ ಅಧಿಕಾರಿಗಳು ಆದೇಶ ನೀಡಿದ್ದಾರೆ.

ಬಾಲ ಚಂದ್ರ ಮುಂತಾದ ಇಸ್ಲಾಮ್‌ನೊಂದಿಗೆ ಬೆಸೆದುಕೊಂಡಿರುವ ಸಂಕೇತಗಳು ಮತ್ತು ಅರೇಬಿಕ್ ಭಾಷೆಯಲ್ಲಿ ಬರೆದಿರುವ ‘ಹಲಾಲ್’ ಪದವನ್ನು ನಾಮಫಲಕಗಳಿಂದ ತೆಗೆಯುವಂತೆ ಅಧಿಕಾರಿಗಳು ಹೇಳಿದ್ದಾರೆ ಎಂದು ಬೀಜಿಂಗ್‌ನಲ್ಲಿರುವ ಹಲಾಲ್ ಉತ್ಪನ್ನಗಳನ್ನು ಮಾರಾಟ ಮಾಡುವ 11 ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳ ಉದ್ಯೋಗಿಗಳು ಹೇಳಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ಅಂಗಡಿಯೊಂದರ ನಾಮಫಲಕದಲ್ಲಿ ಅರೇಬಿಕ್‌ನಲ್ಲಿ ಬರೆದಿರುವ ‘ಹಲಾಲ್’ ಪದವನ್ನು ಮರೆಮಾಡುವಂತೆ ಬೀಜಿಂಗ್‌ನಲ್ಲಿರುವ ನೂಡಲ್ ಅಂಗಡಿಯೊಂದರ ವ್ಯವಸ್ಥಾಪಕನಿಗೆ ಸರಕಾರಿ ಅಧಿಕಾರಿಗಳು ಸೂಚಿಸಿದರು ಹಾಗೂ ತಮ್ಮ ಆದೇಶ ಪಾಲನೆಯಾದ ಬಳಿಕವಷ್ಟೇ ಅವರು ಅಲ್ಲಿಂದ ತೆರಳಿದರು ಎಂದು ಅದು ಹೇಳಿದೆ.

‘‘ಇದು ವಿದೇಶಿ ಸಂಸ್ಕೃತಿ ಹಾಗೂ ನೀವು ಚೀನಾ ಸಂಸ್ಕೃತಿಯನ್ನು ಹೆಚ್ಚಾಗಿ ಬಳಸಬೇಕು ಎಂಬುದಾಗಿ ಅವರು ಹೇಳಿದರು’’ ಎಂದು ವ್ಯವಸ್ಥಾಪಕ ಹೇಳಿದರು.

ಧರ್ಮಗಳು ಮುಖ್ಯವಾಹಿನಿಯ ಚೀನಿ ಸಂಸ್ಕೃತಿಯೊಂದಿಗೆ ಬೆರೆಯಬೇಕು ಎಂಬ ಗುರಿಯೊಂದಿಗೆ 2016ರಲ್ಲಿ ಆರಂಭಿಸಲಾದ ಆಂದೋಲನದ ಹೊಸ ಘಟ್ಟ ಇದಾಗಿದೆ.

ಚೀನಾದ ಕ್ಸಿನ್‌ಜಿಯಾಂಗ್ ವಲಯದಲ್ಲಿ ಮುಸ್ಲಿಮರಿಗೆ ಮರುಶಿಕ್ಷಣ ನೀಡುವುದಕ್ಕಾಗಿ ಸುಮಾರು 10 ಲಕ್ಷ ಉಯಿಘರ್ ಮುಸ್ಲಿಮರನ್ನು ವಿವಿಧ ಬಂಧನ ಶಿಬಿರಗಳಲ್ಲಿ ಅಧಿಕಾರಿಗಳು ಇರಿಸಿದ್ದಾರೆ. ಈ ಬಂಧನ ಶಿಬಿರಗಳಿಗೆ ಅಧಿಕಾರಿಗಳು ವೃತ್ತಿ ತರಬೇತಿ ಶಿಬಿರಗಳು ಎಂಬ ಹೆಸರನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News