ಪ್ರಾಣಿಗಳ ದೇಹದಲ್ಲಿ ಮಾನವ ಅಂಗಗಳನ್ನು ಬೆಳೆಸುವ ಪ್ರಯೋಗ ಆರಂಭ!
ಟೋಕಿಯೊ, ಆ. 1: ಪ್ರಾಣಿಗಳಲ್ಲಿ ಮಾನವ ಅಂಗಗಳನ್ನು ಬೆಳೆಸುವ ಪ್ರಯೋಗವನ್ನು ಜಪಾನ್‌ನ ವಿಜ್ಞಾನಿಗಳು ಆರಂಭಿಸಲಿದ್ದಾರೆ. ಈ ಮಾದರಿಯ ಮೊದಲ ಪ್ರಯೋಗಕ್ಕೆ ಸರಕಾರದ ಅನುಮತಿ ದೊರೆತ ಬಳಿಕ ಅವರು ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯನ್ನು ಇಟ್ಟಿದ್ದಾರೆ.
‘ಇಂಡ್ಯೂಸ್ಡ್ ಪ್ಲೂರಿಪೊಟೆಂಟ್ ಸ್ಟೆಮ್’ ಮಾನವ ಕೋಶಗಳನ್ನು ಹೊಂದಿರುವ ಸುಧಾರಿತ ಪ್ರಾಣಿ ಭ್ರೂಣಗಳನ್ನು ಕಸಿ ಮಾಡುವುದು ಈ ಅತ್ಯಾಧುನಿಕ ಹಾಗೂ ವಿವಾದಾಸ್ಪದ ಸಂಶೋಧನೆಯ ಭಾಗವಾಗಿದೆ. ಈ ಕೋಶಗಳು ದೇಹದ ಯಾವುದೇ ಭಾಗದ ನಿರ್ಮಾಣ ಘಟಕಗಳಾಗಿ ಬೆಳೆಯುವಂತೆ ಮಾಡಬಹುದಾಗಿದೆ.
ಪ್ರಾಣಿಗಳ ದೇಹಗಳೊಳಗೆ ಕಸಿಗೆ ಬೇಕಾದ ಮಾನವ ಅಂಗಗಳನ್ನು ಬೆಳೆಸುವುದು ಭವಿಷ್ಯದಲ್ಲಿ ಸಾಧ್ಯವಾಗಬಹುದು. ಆ ಸುದೀರ್ಘ ಭವಿಷ್ಯದ ದಾರಿಯಲ್ಲಿ ಇದು ಮೊದಲ ಹೆಜ್ಜೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸ್ಟಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಜನೆಟಿಕ್ಸ್ ಪ್ರೊಫೆಸರ್ ಆಗಿರುವ ಹಿರೊಮಿಟ್ಸು ನಕೌಚಿ ನೇತೃತ್ವದಲ್ಲಿ ಸಂಶೋಧನೆ ನಡೆಯುತ್ತಿದೆ. ಪ್ರಾಣಿಗಳಿಗೆ ಮಾನವ ಕೋಶಗಳನ್ನು ಕಸಿ ಮಾಡುವುದಕ್ಕೆ ಸಂಬಂಧಿಸಿದ ನೀತಿಗಳನ್ನು ಜಪಾನ್ ಬದಲಾಯಿಸಿದ ಬಳಿಕ, ಈ ಮಾದರಿಯ ಸಂಶೋಧನೆಯೊಂದಕ್ಕೆ ಅಲ್ಲಿನ ಸರಕಾರ ಅಂಗೀಕಾರ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.